ಭೂಸ್ವಾಧೀನ ಹಗರಣ: ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ (KIADB) ನಡೆಸಿದ್ದ ಸುಮಾರು 55 ಎಕರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರಿ ವಂಚನೆ ನಡೆದಿರುವುದನ್ನು ಪತ್ತೆಹಚ್ಚಿರುವ ಹೈಕೋರ್ಟ್, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ.

​ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ತಾರಾ ವಿತಸ್ಥ ಗಂಜಿ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಅಲ್ಲದೆ, ವಂಚನೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಲೇಕ್ ವ್ಯೂ ಟೂರಿಸಂ ಕಾರ್ಪೊರೇಶನ್ ಸಂಸ್ಥೆಗೆ 10 ಲಕ್ಷ ರೂ. ದಂಡ ವಿಧಿಸಿದೆ.

- Advertisement - 

​ನ್ಯಾಯಾಲಯದ ಪ್ರಮುಖ ಅವಲೋಕನಗಳು:
​ಸರ್ಕಾರಿ ಪ್ರಾಯೋಜಿತ ವಂಚನೆ: 2011ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿಯ ಹೆಸರಿನಲ್ಲಿ ಅದಕ್ಕಿಂತ ಮೊದಲೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದು ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ಕ್ರಿಮಿನಲ್ ಸಂಚು ಎಂದು ನ್ಯಾಯಪೀಠ ಬಣ್ಣಿಸಿದೆ.

​ನಿಷ್ಪಕ್ಷಪಾತ ತನಿಖೆಯ ಅಗತ್ಯ: ಈ ವಂಚನೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೇ ಭಾಗಿಯಾಗಿರುವುದರಿಂದ, ರಾಜ್ಯದ ತನಿಖಾ ಸಂಸ್ಥೆಗಳಿಂದ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಕೇಂದ್ರೀಯ ತನಿಖಾ ದಳದ ತನಿಖೆ ಅಗತ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

- Advertisement - 

​ಕಾನೂನುಬಾಹಿರ ಪ್ರಕ್ರಿಯೆ: ಭೂಮಾಲೀಕರಿಗೆ ಅತ್ಯಲ್ಪ ಪರಿಹಾರ ನೀಡಿ, ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯ ಲಾಭಕ್ಕಾಗಿ ಭೂಮಿ ಕಿತ್ತುಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ.

​ಪ್ರಕರಣದ ಹಿನ್ನೆಲೆ:
​2000
ನೇ ಇಸವಿಯಲ್ಲಿ ಪಿ. ಸತೀಶ್ ಎಂಬುವವರು ರೆಸಾರ್ಟ್ ಮತ್ತು ಟೆಕ್ ಪಾರ್ಕ್ ನಿರ್ಮಾಣದ ಹೆಸರಿನಲ್ಲಿ ಭೂಸ್ವಾಧೀನಕ್ಕೆ ಮನವಿ ಸಲ್ಲಿಸಿದ್ದರು. ಆಗ ಕೆಐಎಡಿಬಿ 2002-2004ರ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಭೂಮಿ ಸ್ವಾಧೀನವಾದ 12 ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದರಿಲಿಲ್ಲ.

​ಟ್ವಿಸ್ಟ್ ಸಿಕ್ಕಿದ್ದು ಎಲ್ಲಿ?:
2023
ರಲ್ಲಿ ಏಕಗವಾಕ್ಷಿ ಸಮಿತಿಯು ಈ ಜಮೀನನ್ನು ಲೇಕ್ ವ್ಯೂ ಟೂರಿಸಂ ಕಾರ್ಪೊರೇಶನ್ಎಂಬ ರಿಯಲ್ ಎಸ್ಟೇಟ್ ಸಂಸ್ಥೆಗೆ ವಾಣಿಜ್ಯ ಕಚೇರಿ ಮತ್ತು ಟೆಕ್ ಪಾರ್ಕ್ ನಿರ್ಮಾಣಕ್ಕಾಗಿ ಭೂಪರಿವರ್ತನೆ ಮಾಡಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಭೂಮಾಲೀಕ ಕೃಷ್ಣಾ ರೆಡ್ಡಿ ಅವರ ವಾರಸುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿತ್ತು, ಆದರೆ ಈಗ ವಿಭಾಗೀಯ ಪೀಠವು ಆ ಆದೇಶವನ್ನು ರದ್ದುಗೊಳಿಸಿ ಭೂಮಾಲೀಕರಿಗೆ ನ್ಯಾಯ ಒದಗಿಸಿದೆ.

​ಮುಖ್ಯ ಅಂಶ: ತನಿಖೆಯ ವರದಿಯ ಪ್ರಕಾರ, ಈ ಕಂಪನಿಯು 2022-23ರವರೆಗೂ ಯಾವುದೇ ವ್ಯವಹಾರವನ್ನೇ ಆರಂಭಿಸಿರಲಿಲ್ಲ. ಇಂತಹ ಶೆಲ್ಕಂಪನಿಗಾಗಿ ರೈತರ ಅಮೂಲ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಈಗ ಸಿಬಿಐ ಬಲೆಗೆ ಬಿದ್ದಿದೆ.

 

Share This Article
error: Content is protected !!
";