ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನಿಗಮಗಳ ನೌಕರರು ಆಗಸ್ಟ್-5 ರ ಮಂಗಳವಾರದಿಂದಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ನೀಡಿದ್ದು ಒಂದು ದಿನದ ಮಟ್ಟಿಗೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರಿನ ಜೆ. ಸುನೀಲ್ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ಎಂ. ಜೆ. ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು ಮುಷ್ಕರಕ್ಕೆ ಒಂದು ದಿನದ ಮಟ್ಟಿಗೆ ತಡೆ ನೀಡಿ ಆದೇಶಿಸಿತು.
ಸಾರಿಗೆ ನಿಗಮಗಳ ಪರ ವಕೀಲರು, ಸಾರಿಗೆ ನೌಕರರ ಸಂಘಟನೆಗಳ ಪರ ಮುಖಂಡರೊಂದಿಗೆ ಮುಖ್ಯಮಂತ್ರಿಗಳ ಸಂಧಾನ ಸಭೆ ನಡೆಯುತ್ತಿದೆ. ಹೀಗಾಗಿ ಮುಷ್ಕರ ಮುಂದೂಡಬೇಕು ಎಂದು ಕೋರಿದರು. ಈ ಅಂಶ ದಾಖಲಿಸಿಕೊಂಡ ಪೀಠ, ಮುಷ್ಕರಕ್ಕೆ ಒಂದು ದಿನದ ಮಟ್ಟಿಗೆ ತಡೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿನ ಪ್ರಮುಖ ಅಂಶಗಳು: ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಸಾರಿಗೆ ಸೇವೆ ಒದಗಿಸುತ್ತಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ನಿಗಮಗಳ ಸೇವೆಯನ್ನು ಯಾವುದೇ ಬದಲಾವಣೆ ಇಲ್ಲದಂತೆ ನಿರ್ವಹಿಸುವಂತೆ ನಿರ್ದೇಶನ ನೀಡಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಉದ್ದೇಶಿತ ಮುಷ್ಕರ ಕಾನೂನುಬಾಹಿರ ಎಂಬುದಾಗಿ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಪ್ರಯಾಣಿಕರ ಹಕ್ಕುಗಳನ್ನು ರಕ್ಷಣೆ ಮಾಡುವುದಕ್ಕಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ಮತ್ತು ಕೈಗಾರಿಕಾ ವಿವಾದ ಕಾಯ್ದೆಗಳ ಅಡಿಯಲ್ಲಿ ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ, ಸಾರಿಗೆ ನೌಕರರ ಸಂಘಟನೆಗಳ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯುವುದಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

