ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಡಿ ತನಿಖೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.
ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್‌ಅವರ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಇಡಿಗೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠವು ಏಪ್ರಿಲ್ 02 ರಂದು ಬುಧವಾರ ಆದೇಶ ಹೊರಡಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೂ ಇಡಿ ತನಿಖೆಯ ಸಂಕಷ್ಟ ಶುರುವಾಗುವ ಸಾಧ್ಯತೆ ಹೆಚ್ಚಿದೆ.
ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ, ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹೇಳಿಕೆ, ಅವರ ನಿವಾಸದಲ್ಲಿ ಶೋಧನೆ, ದಾಖಲೆ ಜಪ್ತಿ ಆದೇಶ ರದ್ದುಪಡಿಸಿತ್ತು. ಈ ಆದೇಶ ಆಧರಿಸಿ ಸಿಎಂ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ ಅವರ ವಿರುದ್ಧದ ಇಡಿ ಸಮನ್ಸ್ ಅನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಹೀಗಾಗಿ ಈ ಆದೇಶ ಪ್ರಶ್ನಿಸಿ ಇಡಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಯಾವುದೇ ತಡೆ ನೀಡದಿದ್ದರೂ, ಮುಡಾದ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹೇಳಿಕೆ, ಅವರಿಂದ ಸಿಕ್ಕ ದಾಖಲೆ ಆಧರಿಸಿ ಇತರೆ ಆರೋಪಿಗಳ ವಿರುದ್ಧ ಇಡಿ ತನಿಖೆ ನಡೆಸಬಹುದೆಂದು ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಲೋಕಾಯುಕ್ತ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. ಹೀಗಾಗಿ ಕೋರ್ಟ್ ಯಾವ ತೀರ್ಪು ಕೊಡುತ್ತೋ ಎಂದು ಸಿಎಂ ಮತ್ತು ಇತರರಿಗೆ ನಡುಕ ಶುರುವಾಗಿದೆ.