ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಹಾರ ಸಂಸ್ಕರಣೆ, ಮೌಲ್ಯ ವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರು ತಾವು ಬೆಳೆಯುವಂತಹ ಹಣ್ಣು ಮತ್ತು ತರಕಾರಿಗಳನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಕೇಂದ್ರ ಸರ್ಕಾರ ಮುಂಬರುವ ದಿನಗಳಲ್ಲಿ ಕೃಷಿ ರೈಲುಗಳು, ಕೃಷಿ ವಿಮಾನಗಳು ಪ್ರಾರಂಭಿಸಲು ಕ್ರಮ ವಹಿಸುತ್ತಿದೆ. ಉದ್ಯಮಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಮುಂದಾಗಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ನೀಡಲಿವೆ ಎಂದು ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಉದ್ಯೋಗ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಮೃದ್ಧ ಕೃಷಿ -ವಿಕಸಿತ ಭಾರತ ನೆಲ,ಜಲ ಮತ್ತು ಬೆಳೆ ಶೀರ್ಷಿಕೆ ಅಡಿಯಲ್ಲಿ ಇಂದಿನಿಂದ ನಾಲ್ಕು ದಿನಗಳವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರವಾಗಿದೆ. ದೇಶದಲ್ಲಿ 50 ಕೋಟಿಗಿಂತ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಯಾವುದೇ ನೆರೆ, ಬರಗಾಲ, ಅತಿವೃಷ್ಠಿ ಸಂಭವಿಸಿದರೂ ದೃತಿಗೆಡದೇ ಕೃಷಿಕರು ಪರಿಶ್ರಮದಿಂದ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದರು.
ದೇಶದಲ್ಲಿ 350 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಬೆಳೆಗಳನ್ನು ಹಾಗೂ 350 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಶೇಕಡ 80 ರಷ್ಟು ಜನ 2.5 ಎಕರೆ ಜಮೀನು ಹೊಂದಿರುವ ಸಣ್ಣ ಭೂ ಹಿಡುವಳಿ ರೈತರಿದ್ದಾರೆ. ಕೃಷಿಕರ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಕಿಸಾನ್ ಸಮ್ಮಾನ್ ಯೋಜನೆ, ಬೆಳೆ ವಿಮೆ, ಹೊಸ ಕೃಷಿ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಪರಿಸರಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ವಿಶ್ವವಿದ್ಯಾನಿಲಯಗಳು ಸುಮಾರು 2 ಸಾವಿರಕ್ಕೂ ಅಧಿಕ ಹೊಸ ತಳಿಗಳನ್ನು ಪರಿಚಯಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೈತರು ತಾವು ಬೆಳೆದಿರುವ ಹಣ್ಣು, ತರಕಾರಿ ಬೆಳೆಗಳನ್ನು ಕೃಷಿಯಾಗಿ ಅಲ್ಲದೇ ಕೃಷಿ ಕೈಗಾರಿಕೆಗಳಾಗಿ ಪರಿವರ್ತನೆ ಮಾಡಿಕೊಂಡು ಅಭಿವೃದ್ದಿ ಹೊಂದಬೇಕು. ಕೃಷಿ ವಿಶ್ವವಿದ್ಯಾನಿಲಯವು ಹೆಚ್ಚು ವಿಜ್ಞಾನಿಗಳನ್ನು ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕøತರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಹಾಗೂ 91 ಸಾಧಕರ ಯಶೋಗಾಥೆಗಳನ್ನೊಳಗೊಂಡ ಕೃಷಿ ಸಾಧಕರ ಕೈಪಿಡಿ ಮತ್ತು ತಂತ್ರಜ್ಞಾನಗಳ ನೂತನ ತಳಿ ಮತ್ತು ತಾಂತ್ರಿಕತೆಗಳ ಪಕ್ಷಿನೋಟ ಬಿಡುಗಡೆ ಮಾಡಲಾಯಿತು.
ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರು:
ಕ್ಯಾನರಾ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಲಕ್ಷ್ಮೀಪುರದ ಎಲ್.ವಿ.ಶಿವರಾಜು, ಕ್ಯಾನರಾ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೆಂಜಿಗನಹಳ್ಳಿಯ ಶ್ರೀಮತಿ ಪದ್ಮಿನಿ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ಮದನಹಳ್ಳಿಯ ಎಂ.ಎನ್.ರವಿಶಂಕರ್ ಅವರಿಗೆ ಲಭಿಸಿದೆ.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೃಷಿ ವಿಶ್ವವಿದ್ಯಾನಿಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಎನ್.ಸೆಲ್ವಕುಮಾರ್, ಕೃಷಿ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ಎಸ್.ವಿ.ಸುರೇಶ, ಕುಲಸಚಿವರಾದ ಡಾ.ಕೆ.ಸಿ.ನಾರಾಯಣಸ್ವಾಮಿ ಹಾಗೂ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳು, ರೈತ ಪ್ರಶಸ್ತಿ ಪುರಸ್ಕøತರು, ಪ್ರಗತಿಪರ ರೈತರು, ವಿವಿಧ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಕೃಷಿ ವಿಜ್ಞಾನಿಗಳು, ವಿವಿಧ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

