ಹಿಂದೂ ಮುಸ್ಲಿಂ ಸಮಾಜದವರು ಪ್ರೀತಿ, ವಿಶ್ವಾಸದಿಂದ ಕೂಡಿ ಬಾಳಬೇಕು: ಶಾಸಕ ಟಿ.ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿವರ್ಷದಂತೆ ಈ ವರ್ಷವೂ ವರ್ಷದ ಹರ್ಷದ ಹಬ್ಬ ಯುಗಾದಿ ಸಂದರ್ಭದಲ್ಲೇ ರಂಜಾನ್ ಹಬ್ಬವನ್ನೂ ಮುಸ್ಲಿಂ ಬಂಧುಗಳು ಆಚರಣೆ ಮಾಡುತ್ತಿದ್ಧಾರೆ. ಎಲ್ಲರಲ್ಲೂ ಹಬ್ಬದ ಉತ್ಸಾಹ ಮನೆ ಮಾಡಿದೆ. ನಾವೆಲ್ಲರೂ ಸಮಾಜದಲ್ಲಿ ಶಾಂತಿ ನೆಲೆಸಲು ಸೌಹಾರ್ಧತೆಯನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ರಂಜಾನ್ ಹಬ್ಬ ಎಲ್ಲಾ ಮುಸ್ಲಿಂ ಸಮಾಜದ ಬಂಧುಗಳಿಗೆ ನೆಮ್ಮದಿ, ಸುಖಶಾಂತಿ ನೀಡಲಿ ಎಂದು ಅಲ್ಲಾನನ್ನು ಪ್ರಾರ್ಥಿಸಿರುವುದಾಗಿ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಸೋಮವಾರ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಂಧುಗಳು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಈ ಹಬ್ಬ ಎರಡೂ ಕೋಮುಗಳಲ್ಲಿ ವಿಶ್ವಾಸವನ್ನು ಗಟ್ಟಿಕೊಳಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ವಿಶ್ವಾಸ, ಪ್ರೀತಿಯಿಂದ ಬೆರೆತಾದ ಮಾತ್ರ ಯಾವುದೇ ಸಮಸ್ಯೆ ಉಂಟಾಗದು ಎಂದರು.

ಮುಸ್ಲಿಂ ಸಮಾಜದ ಅಧ್ಯಕ್ಷ ಅತಿಕೂರ್‌ರೆಹಮಾನ್ ಮಾತನಾಡಿ, ಪ್ರತಿವರ್ಷವೂ ಶಾಸಕ ಟಿ.ರಘುಮೂರ್ತಿಯವರು ಇಲ್ಲಿಗೆ ಆಗಮಿಸಿ ಎಲ್ಲರಿಗೂ ಶುಭವನ್ನು ಹಾರೈಸುತ್ತಾ ಬಂದಿದ್ಧಾರೆ. ಕಳೆದ ಎರಡು ತಿಂಗಳ ಹಿಂದೆ ಈದ್ಗಾ ಮೈದಾನದಲ್ಲಿ ಸ್ಲಾಬ್‌ಗಳ ನಿರ್ಮಾಣಕ್ಕೆ ಅನುದಾನದಲ್ಲಿ ಹಣ ನೀಡಿದ್ಧಾರೆ. ಮುಸ್ಲಿಂ ಸಮಾಜದ ಯಾವುದೇ ಕೆಲಸಗಳಿದ್ದರೂ ಸಹ ಅವುಗಳನ್ನು ಹೆಚ್ಚು ಮುತುವರ್ಜಿಯಿಂದ ಮಾಡುವ ಮೂಲಕ ಸಮಾಜದ ವಿಶ್ವಾಸಗಳಿಸಿದ್ಧಾರೆಂದರು.

ನಗರಸಭೆ ಅಧ್ಯಕ್ಷೆ ಮಂಜುಳಾಪ್ರಸನ್ನಕುಮಾರ್, ಉಪಾಧ್ಯಕ್ಷೆ ಸುಮಭರಮಯ್ಯ, ಸದಸ್ಯರಾದ ರಮೇಶ್‌ಗೌಡ, ಪರಶುರಾಮಪುರ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಮುಸ್ಲಿಂ ಮುಖಂಡರಾದ ಮುಜೀಬುಲ್ಲಾ, ಅನ್ವರ್‌ಮಾಸ್ಟರ್, ಎಚ್.ಎಸ್.ಸೈಯದ್, ಬಿ.ಫರೀದ್‌ಖಾನ್, ಸಲೀಂ, ಜುಬೇರ್, ಕೆ.ದಾದಾಪೀರ್ ಮುಂತಾದವರು ಉಪಸ್ಥಿತರಿದ್ದರು. 

 

Share This Article
error: Content is protected !!
";