ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿರುವುದನ್ನೇ ಕಾರಣವಾಗಿರಿಸಿ ಕೊಂಡು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿರುವ ಕ್ರಮ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲ, ಅಲ್ಲದೇ ಪೊಲೀಸರ ಮೂಲಕ ಹಿಂದೂ ಕಾರ್ಯಕರ್ತರನ್ನು ಬೆದರಿಸಿ ದಬ್ಬಾಳಿಕೆ ನಡೆಸುವ ಈ ಸರ್ಕಾರ ಕ್ಷುಲ್ಲಕ ಕಾರಣಕ್ಕಾಗಿ ಬಂಧಿಸುತ್ತಿರುವುದು, ಸುಳ್ಳು ಮೊಕದ್ದಮೆ ದಾಖಲಿಸಿ ಬೆದರಿಸಲು ಮುಂದಾದಂತೆ ಕಾಣುತ್ತಿದೆ.
ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರ ವಿರೋಧಿ ಹಾಗೂ ಜಿಹಾದಿ ಶಕ್ತಿಗಳನ್ನು ಪೋಷಿಸಿಕೊಂಡು ಬರುವ ರಾಜ್ಯ ಸರ್ಕಾರ ಪದೇಪದೇ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರನ್ನು ಕುಗ್ಗಿಸುವ ಕೆಲಸಕ್ಕೆ ಮುಂದಾಗಿರುವುದನ್ನು ಬಿಜೆಪಿ ಕರ್ನಾಟಕ ಸಹಿಸದು. ಈ ಕೂಡಲೇ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರನ್ನು ಬಿಡುಗಡೆ ಮಾಡಿ ಈ ರೀತಿಯ ಬಂಧನಗಳು ಮತ್ತೆ ಮರುಕಳಿಸಿದ್ದೇ ಆದಲ್ಲಿ ಮುಂದಾಗುವ ಪರಿಣಾಮವನ್ನು ರಾಜ್ಯ ಸರ್ಕಾರವೇ ಎದುರಿಸಬೇಕಾದೀತು ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.