ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜದಲ್ಲಿ ಹಿಂದೂಗಳನ್ನು ರಕ್ಷಿಸುವ ಹಾಗೂ ಮತಾಂಧ ಶಕ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಿಂದೂಗಳು ಒಂದಾಗಬೇಕಿದೆ ಎಂದು ಬಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಂಯೋಜಕ ಪ್ರಭಂಜನ್ ಹೇಳಿದರು.
ನಗರದ ಬಿಇಓ ವೃತ್ತದ ಸಿಂಧೂರ ವೇದಿಕೆಯಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಹಿಂದೂಗಳನ್ನು ಒಂದುಗೂಡಿಸಲು ಮನೆಯಲ್ಲಿದ್ದ ಗಣೇಶನನ್ನು ಹೊರಗಡೆ ತಂದು ಆಚರಿಸುವ ಪದ್ಧತಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಶುರುವಾಯಿತು. ಆಗ ಬ್ರಿಟಿಷರ ವಿರುದ್ಧ ಹೋರಾಡಲು ಹಿಂದೂಗಳು ಒಂದಾಗಿದ್ದರು. ಗಣೇಶನ ಮೆರವಣಿಗೆಯಲ್ಲಿ ಡಿಜೆ ನಿಷೇಧ ಮಾಡುವುದು, ಮೆರವಣಿಗೆಗೆ ಕರಾರು ಹಾಕುವುದು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೇವಲ ಮತ ಗಳಿಕೆಗಾಗಿ ಗಣೇಶೋತ್ಸವದ ಮೇಲೆ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಬೇಡ ಎಂದು ಎಚ್ಚರಿಸಿದರು.
ಗಣಪತಿ ಹಬ್ಬ ಬಂದರೆ ಕೆಲವರಿಗೆ ಭಯ ಶುರುವಾಗುತ್ತದೆ. ಹಿರಿಯೂರಿನ ಗಣೇಶೋತ್ಸವ ಒಂದು ದಿನದ ಮೆರವಣಿಗೆಗೆ ಸೀಮಿತವಾಗಬಾರದು. ಯುವ ಪೀಳಿಗೆಯು ಗಣೇಶೋತ್ಸವದ ಮೂಲಕ ಒಂದಾಗಬೇಕಿದೆ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗಳಿಗೆ ಕಲ್ಲು ಬೀಳುವ ಸಂಭವಿರುತ್ತದೆ. ಈ ಬಗ್ಗೆ ಹಿಂದೂಗಳು ಎಚ್ಚರಿಕೆ ವಹಿಸಬೇಕು. ನಾವು ಶಾಂತಿ ಪ್ರಿಯರು. ಆದರೆ ಹಿಂದೂ ಸಮಾಜ ವಿರಾಟ ಹನುಮನ ರೂಪ ಪಡೆಯುವ ಕಾಲ ಬರುವಂತೆ ಯಾರೂ ಮಾಡಬಾರದು ಎಂದರು.
ಭವ್ಯ ಮೆರವಣಿಗೆ-
ನಗರದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯನ್ನು ಅಲಂಕರಿಸಿದ ಟ್ರಾಕ್ಟರ್ ನಲ್ಲಿ ಕೂರಿಸಿ ಭವ್ಯ ಮೆರವಣಿಗೆಯ ಮೂಲಕ ಶಂಕರ ಮಠದಿಂದ ಮುಖ್ಯ ರಸ್ತೆಗೆ ಕರೆ ತರಲಾಯಿತು. ಬಿಇಓ ಕಚೇರಿ ಮುಂಭಾಗ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮದ್ಯಾಹ್ನ 2 ವರೆಗೆ ಆರಂಭವಾದ ಶೋಭಾಯಾತ್ರೆ ಗಾಂಧಿ ವೃತ್ತ, ಹುಳಿಯಾರು ರಸ್ತೆ, ಚರ್ಚ್ ರಸ್ತೆ, ಆಸ್ಪತ್ರೆ ರಸ್ತೆ ಮೂಲಕ ರಂಜಿತಾ ಹೋಟೆಲ್ ಮುಂಭಾಗದಿಂದ ಮತ್ತೆ ಗಾಂಧಿ ವೃತ್ತಕ್ಕೆ ಸಂಜೆ ಬಂದಾಗ ಟ್ರಸ್ ಮಾದರಿಯ ಲೇಸರ್ ಲೈಟಿಂಗ್ಸ್ ಮೂಲಕ ಜಗಮಗಿಸುವ ವಿದ್ಯುತ್ ದೀಪಗಳಿಂದ ಗಣೇಶ ಮೂರ್ತಿ ಪ್ರಜ್ವಲಿಸುವಂತಹ ವ್ಯವಸ್ಥೆ ಮಾಡಲಾಗಿತ್ತು.
ಕೇಸರಿ ಶಾಲು ಹೊದ್ದ ಯುವಕರು ಮೆರವಣಿಗೆಯುದ್ಧಕ್ಕೂ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀ ರಾಮ್ ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ಕೊನೆಗೆ ಬಬ್ಬೂರು ಫಾರಂ ಬಳಿ ಇರುವ ತೋಟಗಾರಿಕಾ ಕಾಲೇಜು ಹಿಂಭಾಗದ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಸುಗಮವಾಗಿ ಸಾಗಲು ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಪಟ್ಟಣದ ಒಳಗಡೆ ಬೃಹತ್ ವಾಹನಗಳು ಬರುವುದನ್ನು ನಿಷೇಧಿಸಲಾಗಿತ್ತು.
ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಡಿ.ನಾರಾಯಣ ರೆಡ್ಡಿ, ಗೌರವಾಧ್ಯಕ್ಷ ಅಮರ್ ನಾಥ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರಶಾಂತ್, ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಬಿಬಿಎಂಪಿ ಸದಸ್ಯ ರಾಜಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್, ಬಿಜೆಪಿ ಹಿರಿಯ ಮುಖಂಡ ಎನ್ ಆರ್. ಲಕ್ಷ್ಮೀಕಾಂತ್, ತಾಪಂ ಮಾಜಿ ಸದಸ್ಯ ಹಾಲಪ್ಪ, ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಎ. ರಾಘವೇಂದ್ರ, ಎಂಎಸ್ ರಾಘವೇಂದ್ರ, ಚೇತನ್ , ಮಂಜುನಾಥೇಶ್ವರ, ನವೀನ್, ಪ್ರಮೋದ್, ವೆಂಕಟೇಶ್, ಎಬಿವಿಪಿ ಯೋಗೇಶ್ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.

