ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಉಸ್ತುವಾರಿ ಸಚಿವರೇ ಪ್ರತಿನಿಧಿಸುವ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿನ ಕೆಎಸ್ಆರ್ ಟಿಸಿ ಬಸ್ ಡಿಪೋ ಉದ್ಘಾಟನೆಗೆ ಮೀನಾಮೇಷ ಎಣಿಸಲಾಗುತ್ತಿದ್ದು ಇದರಿಂದ ಗ್ರಾಮೀಣ ಸಾರಿಗೆ ವ್ಯವಸ್ಥೆಯಲ್ಲಿ ತೀವ್ರ ವ್ಯತ್ಯಯ ಆಗಲಿರುವುದನ್ನು ವಿರೋಧಿಸಿ ಮೇ 5 ರಂದು ಸೋಮವಾರ ನಗರದ ಕೆಎಸ್ಆರ್ಟಿಸಿ ಡಿಪೋ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ತಿಳಿಸಿದರು.
ಸಂಘದ ಕಚೇರಿಯಲ್ಲಿ ಕರೆದಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಟನೆ ಅನೇಕ ಬಾರಿ ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸಲು ಒತ್ತಾಯಿಸಿ ಚಳುವಳಿ ಮಾಡಿದೆ. ಇದುವರೆಗೂ ಪ್ರಾರಂಭ ಮಾಡದೆ ವಿಳಂಬ ಮಾಡುತ್ತಿರುವುದು ಸಚಿವ ಸುಧಾಕರ್ ಅವರ ನಿರ್ಲಕ್ಷ್ಯ ಎನ್ನಬಹುದು ಎಂದು ಅವರು ಆರೋಪಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೂಲಿ ಕಾರ್ಮಿಕರಿಗೆ ಮತ್ತು ಮಹಿಳೆಯರಿಗೆ ಅನೇಕ ರೀತಿಯ ತೊಂದರೆಗಳು ಆಗುತ್ತಿವೆ ಆದ್ದರಿಂದ ಸಂಬಂಧಪಟ್ಟ ಸಾರಿಗೆ ಸಚಿವರು ಹಾಗೂ ಕೆಎಸ್ಆರ್ಟಿಸಿ ನಿಗಮದ ಎಂಡಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ಡಿಪೋ ಉದ್ಘಾಟನೆ ದಿನಾಂಕ ನಿಗದಿ ಮಾಡುವವರೆಗೂ ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕಿನ ಅನೇಕ ಭಾಗಗಳಲ್ಲಿ ವಿಪರೀತ ಗಾಳಿ ಮಳೆಗೆ ಅನೇಕ ಭಾಗದಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದು ಮೂರ್ನಾಲ್ಕು ದಿನ ಕಳೆದರೂ ವಿದ್ಯುತ್ ಸಂಪರ್ಕ ಕಡಿತವಾಗಿ ತೋಟದ ಮನೆಯಲ್ಲಿ ವಾಸ ಮಾಡುವ ರೈತರಿಗೆ ತುಂಬಾ ತೊಂದರೆ ಆಗಿದೆ. ಬೆಸ್ಕಾಂ ಇಲಾಖೆಯ ಅಧಿಕಾರಿಗಳು ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿರುಗಾಳಿ ಆಲಿಕಲ್ಲು ಮಳೆಯಿಂದ ಅಡಿಕೆ ಮರಗಳು ಬಿದ್ದಿದ್ದು ಅನೇಕ ಬೆಳೆಗೆ ಹಾನಿಯಾಗಿದೆ. ಈ ಬಗ್ಗೆ ತುರ್ತು ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ಬಗರ್ ಹುಕ್ಕು ಅರ್ಜಿ ಸಲ್ಲಿಸಿರುವ ರೈತರಿಗೆ ಭೂಮಿ ಮಂಜೂರಾತಿ ಹಾಗೂ ಒನ್ ಟು ಫೈವ್ ಮಾಡುವಾಗ ಅನೇಕ ರೈತರಿಗೆ ಅನ್ಯಾಯ ಆಗುತ್ತದೆ. ಇದರ ಬಗ್ಗೆ ಕಂದಾಯ ಇಲಾಖೆಯವರು ಯಾವುದೇ ರೈತರಿಗೆ ತೊಂದರೆ ಆಗದ ಹಾಗೆ ಬಗರ್ ಹುಕುಂ ಸಾಗುವಳಿ ಮಾಡಿರುವ ಎಲ್ಲ ರೈತರಿಗೂ ಸಮರ್ಪಕವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆಯಲ್ಲಿ ರೈತರಿಗೆ ಅನೇಕ ರೀತಿಯ ತೊಂದರೆ ಆಗುತ್ತಿದ್ದು ವ್ಯವಸಾಯ ಮಾಡುತ್ತಿರುವ ಯಾವುದೇ ರೈತರನ್ನು ಒಕ್ಕಲಿಬ್ಬಿಸಬಾರದೆಂದು ಸಭೆಯಲ್ಲಿ ತಿಳಿಸಲಾಯಿತು.
ಶಿಕ್ಷಣದಲ್ಲಿ ನಮ್ಮ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ 28ನೇ ಸ್ಥಾನ ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ ಆದ್ದರಿಂದ ನಮ್ಮ ಜಿಲ್ಲೆಯ ಎಲ್ಲಾ ಶಿಕ್ಷಕರು ಹಾಗೂ ಪಿ ಯು ಸಿ ಕಾಲೇಜ್ ಉಪನ್ಯಾಸಕರನ್ನು ಕೂಡಲೇ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರು ಚಿತ್ರದುರ್ಗ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಹೋರಾಟ ಚಳುವಳಿಯನ್ನು ಹಮ್ಮಿಕೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂಗಾರು ಉತ್ತಮ ಮಳೆ ಆಗುತ್ತಿದ್ದು ಬಿತ್ತನೆ ಬೀಜ ಗೊಬ್ಬರ ಹಾಗೂ ಕೃಷಿ ಪರಿಕರಗಳ ಸಕಾಲಕ್ಕೆ ಒದಗಿಸಬೇಕು ಮತ್ತು ಕಳಪೆ ಬಿತ್ತನೆ ಬೀಜ ವಿತರಿಸದಂತೆ ಕೃಷಿ ಇಲಾಖೆ ಜಾಗೃತಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಇನ್ನು ಮುಂತಾದ ಅನೇಕ ರೈತಪರ ವಿಚಾರಗಳನ್ನು ಚರ್ಚಿಸಿ ಸೂಕ್ತ ಹೋರಾಟ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ, ರೈತ ಮುಖಂಡರಾದ ಸಿದ್ದರಾಮಣ್ಣ, ಅಳ್ಳಿಕೆರೆ ತಿಪ್ಪೇಸ್ವಾಮಿ, ಎಂಆರ್ ಈರಣ್ಣ, ಮೀಸೆ ರಾಮಣ್ಣ, ಗೌಡಪ್ಪ, ತಿಮ್ಮಾ ರೆಡ್ಡಿ, ರಂಗಸ್ವಾಮಿ, ಬಾಲಕೃಷ್ಣ, ಈರಣ್ಣ, ಜಯಣ್ಣ, ಜಗದೀಶ್, ನಾರಾಯಣಪ್ಪ, ರಾಜಪ್ಪ, ರಮೇಶ್, ಚಿತ್ರಲಿಂಗಪ್ಪ, ಆರ್ ಕೆ ಗೌಡ್ರು, ನಾಗರಾಜ್ ಮುಂತಾದವರು ಭಾಗವಹಿಸಿದ್ದರು.