ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಟಿಬಿ ವೃತ್ತದಿಂದ ಗಾಂಧಿ ವೃತ್ತದ ತನಕ ರಸ್ತೆ ಅಗಲೀಕರಣವಾಗುತ್ತಿದ್ದು ತಾಲೂಕು ಕಚೇರಿ ಸಮೀಪದ ವೇದಾವತಿ ಸೇತುವೆಯಿಂದ ಗಾಂಧಿ ವೃತ್ತ, ಹುಳಿಯಾರ್ ರಸ್ತೆಯ ಅಗಲೀಕರಣವನ್ನು 50 ಅಡಿಗೆ ಸೀಮಿತ ಮಾಡುತ್ತಿರುವ ಷಡ್ಯಂತ್ರ ನಡೆಯುತ್ತಿರುವುದನ್ನು ಅರಿತ ಜನಪರ ಹೋರಾಟಗಾರರು ಬೃಹತ್ ಹೋರಾಟ ನಡೆಸಲು ಮುಂದಾಗಿದ್ದಾರೆ.
ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರುಗಳೇ ಮುಂದೆ ನಿಂತು ಸರ್ಕಾರದ ಮಾರ್ಗಸೂಚಿ ಅನ್ವಯ ಮುಖ್ಯ ರಸ್ತೆ ಅಗಲೀಕರಣ ಮಾಡುತ್ತಿದ್ದರೆ ಹಿರಿಯೂರು ಕ್ಷೇತ್ರದಲ್ಲಿ ಆ ರೀತಿ ಆಗುತ್ತಿಲ್ಲ, ಕೇವಲ 200 ಮಂದಿ ವರ್ತಕರಿಗಾಗಿ ಕ್ಷೇತ್ರದ 3 ಲಕ್ಷ ಜನರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ ಎಂದು ಕಠಿಣ ಶಬ್ದಗಳಲ್ಲಿ ಜನಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.
ಕಾನೂನಾತ್ಮಕವಾಗಿ ರಸ್ತೆ ಅಗಲೀಕರಣ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರಿಗಳು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ತೆರಳಲಿ ಎಂದು ಹೋರಾಟಗಾರರು ತಾಕೀತು ಮಾಡಿದ್ದಾರೆ.
ಮಾಜಿ ನಗರಸಭಾಧ್ಯಕ್ಷ ಅಜೇಯ ಕುಮಾರ್ ಅಲಿಯಾಸ್ ಅಜ್ಜಪ್ಪ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಇದು ರಾಜಕೀಯ ಪ್ರೇರಿತ ಸಭೆ ಅಲ್ಲ. ಇದು ನಗರದ ನಾಗರಿಕರ ಹಕ್ಕಿನ ಪ್ರಶ್ನೆ. ನಾನು ಅಧ್ಯಕ್ಷನಾದ ಮೇಲೆ ರಸ್ತೆ ಅಗಲೀಕರಣ ಮಾಡಲು ಪಣ ತೊಟ್ಟಿದ್ದೆ. ಇದರ ವಿರುದ್ಧ ನಗರದ 95 ಮಂದಿ ಅಂಗಡಿಗಳ ಮಾಲೀಕರು ಪ್ರಕರಣ ದಾಖಲಿಸಿದ್ದರು. ಆದರೆ ನಗರಸಭೆಯ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದ ಹಿಂದಿನ ವಕೀಲರನ್ನು ಬದಲಾಯಿಸಿ ಬೇರೊಬ್ಬ ವಕೀಲರನ್ನು ನೇಮಕ ಮಾಡಿಕೊಂಡು ಕೋರ್ಟ್ ಗೆ ಅಗತ್ಯ ದಾಖಲಾತಿ ಒದಗಿಸುವಾಗ ಮುಖ್ಯ ರಸ್ತೆಯ ಎಲ್ಲಾ ಕಟ್ಟಡಗಳು ನಗರಸಭೆ ಸ್ವತ್ತು ಎಂದು ತಿಳಿಯಿತು.
ಕೆಲವರು ನಕಲಿ ದಾಖಲಾತಿ ಇಟ್ಟು ಕೊಂಡು ವಿನಾ ಕಾರಣ ಕೋರ್ಟ್ ಗೆ ಹೋಗಿದ್ದರು. ಆರಂಭದಲ್ಲಿ ನಾವು 12 ಕಟ್ಟಡಕ್ಕೆ 7 ದಿನದೊಳಗೆ ಹೊಡೆಯಲು ಆದೇಶ ಮಾಡಿಸಿದೆವು. ಅವರು ಮತ್ತೆ ಕೋರ್ಟ್ ಗೆ ಹೋಗಿ ಪರಿಹಾರ ಕೇಳಿದರು. ಇನ್ನೇನ್ ಕಟ್ಟಡ ಹೊಡೆದು ರಸ್ತೆ ಅಗಲೀಕರಣ ಆಗುತ್ತೆ ಅನ್ನುವಾಗ ನನ್ನ ಅಧ್ಯಕ್ಷ ಅವಧಿ ಮುಗಿಯಿತು. ರಸ್ತೆ ಅಗಲೀಕರಣಕ್ಕೆ ಸಚಿವ ಸುಧಾಕರ್ ಸಾಕಷ್ಟು ಸಹಕಾರ ಕೊಟ್ಟರು. ಆನಂತರದ ಬೆಳವಣಿಗೆಯಲ್ಲಿ ಸಚಿವರು ಸಹಕಾರ ಕೊಡಲಿಲ್ಲ ಎನ್ನುವುದಕ್ಕಿಂತ ಮಹಾ ಮೌನ ವಹಿಸಿದರು ಎಂದರೆ ತಪ್ಪಾಗಲಾರದು ಎಂದು ಅಜ್ಜಪ್ಪ ತಿಳಿಸಿದರು.
ಸೆ 18ಕ್ಕೆ ಕೋರ್ಟ್ ಕೊನೆ ಆದೇಶ ಕೊಟ್ಟು ಅದು ನಗರಸಭೆ ಆಸ್ತಿ ಎಂದಿತು. ಪರಿಹಾರ ಬೇಕೇ ಬೇಕು ಎಂದರೆ ಮೂರು ವಾರದೊಳಗೆ ಆರ್ ಸಿ ಅವರ ಬಳಿ ಹೋಗಿ ಎಂದು ಕೋರ್ಟ್ ಸೂಚಿಸಿತು. ಆದರೆ ಅವರು ಅಲ್ಲಿಗೆ ಹೋಗಲಿಲ್ಲ.
ಈ ಮದ್ಯೆ ಎರಡು ತಿಂಗಳಲ್ಲಿ ಡಿಎಂಎ ಗೆ ಕಟ್ಟಡದಾರರು ಅರ್ಜಿ ಕೊಟ್ಟು ಪರಿಹಾರ ಕೇಳಿದರು.
ಇದೀಗ 50 ಅಡಿ ಮಾತ್ರ ಹೊಡೆಯುತ್ತಾರೆ ಎಂಬ ಮಾಹಿತಿ ಇದೇ.. ಈ ಮಾಹಿತಿ ನಾಗರಿಕರಿಗೆ ತಿಳಿಸುವ ಉದ್ದೇಶ ದಿಂದ ಈ ಸಭೆ ಕರೆದೆವು.
ಸಭೆ ಕರೆದ ವಿಷಯ ತಿಳಿಯುತ್ತಿದ್ದಂತೆ ಈಗ ಮತ್ತೆ ಮಂತ್ರಿಗಳು ಅಗಲೀಕರಣ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಿ ಎಂದು ಮೊನ್ನೆ ಮೀಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಪೌರಾಯುಕ್ತರು ಇನ್ನು ಸ್ವಲ್ಪ ದಿನ ಸಭೆ ಕರೆಯಬೇಡಿ ಇರಿ ಎಂದರು. ಆದರೆ ನಾವು ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಮಂತ್ರಿಗಳು ಮೂರು ಬಾರಿ ಗೆದ್ದಾಗಲೂ ಮತ ಹಾಕಿದ್ದೇವೆ. ಪ್ರತಿ ಬಾರಿಯು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿ ಯಾಕೋ ಒತ್ತಡಗಳಿಗೆ ಒಳಗದಂತೆ ಕಾಣುತ್ತಾರೆ. ಕೇವಲ ನೂರು ಮಂದಿಗಾಗಿ 3 ಲಕ್ಷ ಜನರ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಅಜ್ಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಗೌರಿ ಬಿದನೂರು, ಜಗಳೂರಿನಲ್ಲಿ ಶಾಸಕರು ಮುಂದೆ ನಿಂತು ಕಟ್ಟಡ ತೆರವು ಮಾಡುತ್ತಿದ್ದಾರೆ. ಅರುಣ್ ಟೆಕ್ಸ್ ಟೈಲ್ ನವರು 2014 ರಲ್ಲೇ ತೆರವಿಗೆ ಆದೇಶ ಆಗಿದೆ. ಇಲ್ಲಿಯವರೆಗೆ ಆ ಬಗ್ಗೆ ಯಾರು ಮಾತಾಡಿಲ್ಲ. ಪರಿಹಾರ ಕೊಟ್ಟೆ ಹೊಡೆಯುತ್ತೇವೆ ಅಂದರೆ ಕೊಟ್ಟೆ ಹೊಡೆಯಿರಿ. ನಮ್ಮ ಅಭ್ಯಂತರ ವಿಲ್ಲ. ಆದರೆ ರಸ್ತೆ ಅಗಲೀಕರಣ ಮಾಡಲೇಬೇಕು. ಇಲ್ಲವಾದರೆ ಹೋರಾಟ ಮಾಡಿಯೇ ರಸ್ತೆ ಅಗಲೀಕರಣ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅಜ್ಜಪ್ಪ ನಾವು ಹೋರಾಟಕ್ಕೆ ಸಿದ್ದ ಸವಾಲ್ ಹಾಕಿದರು.
ದಲಿತ ಮುಖಂಡ, ಜನಪರ ಹೋರಾಟಗಾರ ತಿಮ್ಮರಾಜ್ ಮಾತನಾಡಿ 20 ವರ್ಷದಿಂದ ರಸ್ತೆ ಅಗಲೀಕರಣಕ್ಕೆ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸಂಘಟನೆ ರಸ್ತೆ ವಿಸ್ತರಣೆಗೆ ಬೆಂಬಲ ನೀಡುತ್ತದೆ. ಪ್ರತಿನಿತ್ಯ ಅಪಘಾತ ಆಗುತ್ತಿವೆ. ಇನ್ನಾದರೂ ರಸ್ತೆ ಅಗಲೀಕರಣ ಆಗಬೇಕು.ರಸ್ತೆ ಅಗಲೀಕರಣ ಹೋರಾಟಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆಸಿ ಹೊರಕೇರಪ್ಪ ಮಾತನಾಡಿ ನಗರ ದಿನೇ ದಿನೇ ಬೆಳೆಯುತ್ತಿದೆ. ಪಾದಚಾರಿ ರಸ್ತೆಗಳೇ ಇಲ್ಲ. ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಜನಸಂದಣಿಯಿಂದ ಕೂಡಿದ ನಗರ ಇದು. ಅಜ್ಜಪ್ಪನವರು ನಗರಸಭೆ ಅಧ್ಯಕ್ಷ ಹುದ್ದೆಯಿಂದ ಇಳಿದ ಮೇಲೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ರಸ್ತೆ ಅಗಲೀಕರಣವಾದರೆ ನಗರ ಅಭಿವೃದ್ಧಿ ಆಗಲಿದೆ. ಇಲ್ಲಿ ಯಾರ ಕೈವಾಡವೊ ರಸ್ತೆ ಅಗಲೀಕರಣ ಆಗುತ್ತಿಲ್ಲ. ಉಗ್ರ ಪ್ರತಿಭಟನೆ ಅನಿವಾರ್ಯ ವಾಗಿದೆ ರೈತ ಸಂಘ ಸಂಪೂರ್ಣ ಬೆಂಬಲ ನೀಡಲಿದೆ.
ದಲಿತ ಮುಖಂಡ, ಜನಪರ ಹೋರಾಟಗಾರ ಕೆಪಿ ಶ್ರೀನಿವಾಸ್ ಮಾತನಾಡಿ ರಸ್ತೆ ಅಗಲೀಕರಣ ರಾಜಕೀಯ ತಿರುವು ಪಡೆಯುತ್ತಿವೆ. ರಸ್ತೆ ಅಗಲೀಕರಣ ವಿಚಾರ ಬಂದಾಗಲೆಲ್ಲಾ ಹೋರಾಟಗಾರರ ಮೇಲೆ, ಸಂಘಟನೆ, ಜನಪ್ರತಿನಿಧಿಗಳು, ನಗರಸಭೆಯವರ ಮೇಲೆ ಬುಕ್ ಆಗಿರುವ ಆರೋಪಗಳು ಬಂದಿವೆ.
ಇಲ್ಲಿಯವರೆಗೆ ಬಂದ ಆರೋಪಗಳಿಗೆ ಉತ್ತರ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೌoಟರ್ ಕೊಡಲು ಅಜ್ಜಪ್ಪನವರು ಈ ವಿಷಯ ಹಿಡಿದಿದ್ದಾರೆ ಎಂಬ ಮಾತಿದೆ. ಅಲ್ಲದೆ ರಸ್ತೆ ಅಗಲೀಕರಣ ಹಿತರಕ್ಷಣಾ ಸಮಿತಿ ಮಾಡುವುದಾದರೆ ರಾಜಕಾರಣಿಗಳು ಕೇವಲ ಬೆಂಬಲ ನೀಡಲಿ, ಹೋರಾಟಗಾರರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಿ ಎಂದು ಅವರು ತಾಕೀತು ಮಾಡಿದರು.
ರೈತ ಮುಖಂಡರು ಹಾಗೂ ಜನಪರ ಹೋರಾಟಗಾರ ಹೆಚ್ ಆರ್ ತಿಮ್ಮಯ್ಯ ಮಾತನಾಡಿ, ಹಿರಿಯೂರು ನಗರ ಜಿಲ್ಲೆಯ ಪ್ರಮುಖ ನಗರವಾಗಿದೆ. ರಾಜಕಾರಣಿಗಳು ಒತ್ತುವರಿ ತೆರವಿಗೆ ನಿಲ್ಲಬೇಕಿತ್ತು. ಆದರೆ ಆ ಕೆಲಸ ಆಗುತ್ತಿಲ್ಲ. ಇದು ಅಪಮಾನಕರ ಸಂಗತಿ. ರಸ್ತೆ ಅಗಲೀಕರಣಕ್ಕೆ ಈಗ ಯಾವುದೇ ಅಡ್ಡಿ ಆತಂಕವಿಲ್ಲ. ಒತ್ತುವರಿ ಕಟ್ಟಡಗಳನ್ನು ಹೊಡೆಯಲು ಹಾಕಲು ಕೋರ್ಟ್ ಆದೇಶವಿದೆ. ತಡೆಯಾಜ್ಞೆ ಇಲ್ಲವೇ ಇಲ್ಲ. ಮೀನಾಮೇಷ ಮಾಡದೇ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ರಸ್ತೆ ಅಗಲೀಕರಣದ ಪರವಾಗಿದ್ದು ಕೂಡಲೇ ಅಗಲೀಕರಣ ಮಾಡಬೇಕು ಎಂದರು.
ಮುಖಂಡ ಹೊಸಯಳನಾಡು ರಮೇಶ್ ಮಾತನಾಡಿ ವೇದಾವತಿ ಸೇತುವೆ ನಿರ್ಮಿಸಲು ಹಾಕಿರುವ ಬೃಹತ್ ಪಿಲ್ಲರ್ ಗಳು ಅರ್ಧಕ್ಕೆ ನಿಂತಿವೆ. ಇದಕ್ಕೆ ಕಾರಣ ಗೊತ್ತಿಲ್ಲ. ರಸ್ತೆ ಅಗಲೀಕರಣ ಆಗದಿದ್ದರೆ ನಗರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಅಲ್ಲದೆ ಈಗ ಹಿರಿಯೂರಿಗೆ ಬೃಹತ್ ಕೈಗಾರಿಕೆಗಳು ಬರುತ್ತಿವೆ. ಸುಮಾರು 45 ಸಾವಿರ ಉದ್ಯೋಗ ಸೃಷ್ಠಿಯಾಗುತ್ತಿದ್ದು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರೈತ ಹೋರಾಟಗಾರ ರಮೇಶ್ ಮಾತನಾಡಿ ಇಲ್ಲಿಯವರೆಗೆ ರಸ್ತೆ ಅಗಲೀಕರಣ ಆಗದಿರುವುದೇ ಅಪಮಾನಕರ. ಅಜ್ಜಪ್ಪನವರು ನಗರಸಭೆಯ ಅಧ್ಯಕ್ಷರಾದ ಬದ್ಧತೆಯಿಂದ ಪ್ರಯತ್ನ ಮಾಡಿದ್ದಾರೆ. ಇಷ್ಟು ದಿನದೊಳಗೆ ಅಂತ ಗಂಡುವು ಕೊಟ್ಟು ಆ ಗಡುವಿನೊಳಗೆ ಕಟ್ಟಡ ಹೊಡೆಯದಿದ್ದರೆ ನಾವೇ ಹೊಡೆಯುವ ನಿರ್ಧಾರ ಮಾಡುತ್ತೇವೆ. ಕಟ್ಟಡ ಹೊಡೆಯಲು ಯಾವ ತಕರಾರು ಇಲ್ಲದಿದ್ದರೂ ಮತ್ತೆ ತಡ ಮಾಡುವುದು ಬೇಡ. ನಗರಸಭೆಗೆ ಮುತ್ತಿಗೆ ಹಾಕುವ ಕೆಲಸ ಆಗಬೇಕು ಎಂದು ಹೇಳಿದರು.
ದಲಿತ ಹೋರಾಟಗಾರ ಘಾಟ್ ರವಿ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಸಚಿವರನ್ನು ಭೇಟಿ ಮಾಡೋಣ, ಅವರಿಂದ ಆಗಲ್ಲ ಎಂದ ಮೇಲೆ ಹೋರಾಟ ಮಾಡೋಣ, ಅದಕ್ಕಿಂತ ಮುಖ್ಯವಾಗಿ ಸಂಬಂಧಿಸಿದ ಅಧಿಕಾರಿಗಳ ಜೊತೆ ತುರ್ತಾಗಿ ಮಾತನಾಡಿದ ನಂತರ ಹೋರಾಟ ಕಟ್ಟೋಣ ಎಂದು ಅವರು ಹೇಳಿದರು.
ನಗರದ ಮುಖಂಡರಾದ ದಾದಾಪೀರ್, ವಕೀಲ ಬಬ್ಬೂರು ಸುರೇಶ್, ನಾಗಲಕ್ಷ್ಮಿ ಬಾಬು, ಘಾಟ್ ಚಂದ್ರಪ್ಪ, ರವಿ, ಮುಬಾರಕ್, ಬಾಲೇನಹಳ್ಳಿ ನಾಗರಾಜ್, ಕೃಷ್ಣಮೂರ್ತಿ, ವಕೀಲ ಲಕ್ಷ್ಮಣ್, ಕಿರಣ್ ಮುಂತಾದವರು ಹಾಜರಿದ್ದರು.

