ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಪ್ರಮುಖವಾದ ನಗರದ ತೇರಿನ ಬೀದಿಯ ಶ್ರೀ ಪ್ರಸನ್ನ ಚಂದ್ರಮೌಳೇಶ್ವರ (ಅರುಣಾಚಲೇಶ್ವರ)ಸ್ವಾಮಿ ಬ್ರಹ್ಮ ರಥೋತ್ಸವ ಅತಿ ವೈಭವ ವಿಜೃಂಭಣೆಯಿಂದ ನಡೆಯಿತು.
ತಾಲೂಕು ಆಡಳಿತ ಮುಜರಾಯಿ ಇಲಾಖೆ ಹಾಗೂ ದೇವಾಲಯದ ಭಕ್ತ ಮಂಡಳಿಯಿಂದ ನಡೆದ ಚಂದ್ರಮೌಳೇಶ್ವರ ಬ್ರಹ್ಮ ರಥೋತ್ಸವದಲ್ಲಿ ತಾಲೂಕಿನಾದ್ಯನ್ತ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಗೆ ಹಣ್ಣು ದವನ ಅರ್ಪಿಸಿ ಹರ ಹರ ಮಹದೇವ್ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆಯುತ್ತ ಭಕ್ತಿಯಿಂದ ಸಂಭ್ರಮಿಸಿದರು.
ರಥೋತ್ಸವದ ಅಂಗವಾಗಿ ಶ್ರೀಕಂಟೇಶ್ವರ ಭಕ್ತ ಮಂಡಲಿ, ಶ್ರೀ ಆಂಜನೇಯ ಸ್ವಾಮಿ ದಾಸೋಹ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಿಂದ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ವರ್ಷಮ್ಪ್ರತಿ ಕಡೆಯ ಕಾರ್ತೀಕ ಸೋಮವಾರದಂದು ನಡೆಯುವ ರಥೋತ್ಸವದ ನಂತರದ ದಿನ ಹಗಲು ಪರಿಷೆ, ವೀರಭದ್ರನ ಕುಣಿತ, ಅಶ್ವವಾಹನೋತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಲಿ ತಿಳಿಸಿದೆ. ರಥೋತ್ಸವದಲ್ಲಿ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಸೇರಿದಂತೆ ಹಲವಾರು ಜನ ಪ್ರತಿನಿದಿಗಳು ಭಾಗವಹಿಸಿದ್ದರು.

