ಹಾಕಿ: ಪಾಕ್ ವಿರುದ್ಧ ಭಾರತಕ್ಕೆ ಜಯ
ಚಂದ್ರವಳ್ಳಿ ನ್ಯೂಸ್, ಚೀನಾ:
ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ – ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ಇಂದು(ಸೆ.14) ನಡೆಯಿತು. ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ, ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸತತ ಐದನೇ ಜಯ ದಾಖಲಿಸಿತು. ಇದರೊಂದಿಗೆ ಭಾರತ ಹಾಕಿ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಚೀನಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸೋಲದೆ, ಸೋಲಿಲ್ಲದ ಸರದಾರನಾಗಿ ಮಿಂಚಿದೆ.
ಹಳದಿ ಕಾರ್ಡ್ ಪಡೆದ ಮೂವರು :
ಭಾರತ ಮತ್ತು ಪಾಕಿಸ್ತಾನ ನಡುವೆ ಸ್ಪರ್ಧೆ ಇದ್ದರೆ ಫೈಟ್ ನಡೆಯುವುದು ಮಾಮೂಲಿ. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಈ ಪಂದ್ಯದಲ್ಲೂ ಹಾಗೆಯೇ ನಡೆದಿದೆ. ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆಯಿತು.
ಆಟಗಾರರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಹೀಗಾಗಿ ಕಠಿಣ ಕ್ರಮ ಕೈಗೊಂಡ ಅಂಪೈರ್ ಮೂವರು ಆಟಗಾರರಿಗೆ ಹಳದಿ ಕಾರ್ಡ್ ನೀಡಿದರು. ಹೀಗಾಗಿ ಪಾಕಿಸ್ತಾನದ ಇಬ್ಬರು ಆಟಗಾರರು ಪಂದ್ಯದಿಂದ ಹೊರಬಿದ್ದರೆ, ಭಾರತದ ಒಬ್ಬ ಆಟಗಾರ ಅಮಾನತು ಶಿಕ್ಷೆ ಅನುಭವಿಸಬೇಕಾಯಿತು.