ಪಾಕಿಸ್ತಾನಿಗಳಿದ್ದರೆ ಹೊರಕ್ಕೆ-ಗೃಹ ಸಚಿವ ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳಿದ್ದಾರಾ ಅನ್ನೋದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಬೆಂಗಳೂರಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ಇರುವವರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿಂದೆ ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇವೆ. ಅದರಲ್ಲಿ ಪಾಕಿಸ್ತಾನಿ ಪ್ರಜೆಗಳು ಯಾರಿದ್ದಾರೆ, ಅಧಿಕೃತವಾಗಿ ಯಾರಿದ್ದಾರೆ ಎಂದು ತಿಳಿದು ಅವರನ್ನೆಲ್ಲ ವಾಪಸ್ ಕಳುಹಿಸಲೇಬೇಕಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರ ಪಾಕಿಸ್ತಾನಿಗಳನ್ನ ವಾಪಸ್ ಕಳಿಸುವ ತೀರ್ಮಾನ ತೆಗೆದುಕೊಂಡಿದೆ. ಅನಧಿಕೃತವಾಗಿ ಇರುವುದರ ಬಗ್ಗೆ ಪರಿಶೀಲಿಸಬೇಕು. ಅಧಿಕೃತವಾಗಿ ಇರೋರನ್ನು ಕಳಿಸುವುದಕ್ಕೆ ತಕರಾರಿಲ್ಲ. ಈಗಾಗಲೇ ವೀಸಾ ಕ್ಯಾನ್ಸಲೇಷನ್ ಮಾಡಲಾಗಿದೆ, ವಾಪಸ್ ಹೋಗಿ ಅಂತ ಹೇಳಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾಪಸ್ ಹೋಗಿ ಅಂತ ಹೇಳೋದಷ್ಟೇ ನಮ್ಮ ಕೆಲಸ. ಅನಧಿಕೃತವಾಗಿ ಇಲ್ಲಿ ಇರುವವರನ್ನು ಪೊಲೀಸರು ಹುಡುಕ್ತಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ರಾಷ್ಟ್ರದ ಭದ್ರತೆಗಾಗಿ ಈಗಾಗಲೇ ಕೇಂದ್ರದವರು ಕೆಲವು ನಿರ್ಧಾರಗಳನ್ನು ರಾಜತಾಂತ್ರಿಕವಾಗಿ ತೆಗೆದುಕೊಂಡಿದ್ದಾರೆ. ಇನ್ನೂ ಹೆಚ್ಚು ಕಠಿಣ ನಿರ್ಧಾರಗಳನ್ನು ಮಾಡಬೇಕು. ಕೇಂದ್ರ ಸರ್ಕಾರದ ವಿಚಾರದಲ್ಲಿ ನಾನು ಮಾತನಾಡಲು ಹೋಗಲ್ಲ. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಉಗ್ರ ಸಂಘಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಡಾ.ಜಿ ಪರಮೇಶ್ವರ್ ತಾಕೀತು ಮಾಡಿದರು.

ಬೆಂಗಳೂರಲ್ಲೂ ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ಏಜೆನ್ಸಿ ಇದೆ.‌ಅವರು ಅನೇಕ ಬಾರಿ ನಮ್ಮ ಪೊಲೀಸರಿಗೂ ಮಾಹಿತಿ ಕೊಡುತ್ತಾರೆ. ಕೆಲವು ಸಾರಿ ಮಾಹಿತಿ ಕೊಡದೆ ಅವರೇ ಆಪರೇಟ್ ಮಾಡುತ್ತಾರೆ. ಇಲ್ಲಿ ಸ್ಲೀಪರ್ ಸೆಲ್ಸ್ ಇದೆಯೇ ಎಂಬುದು ನಮಗೆ ಗೊತ್ತಿಲ್ಲದಿದ್ದರೆ ಅವರಿಗೆ ಗೊತ್ತಿರುತ್ತದೆ, ಗೊತ್ತಿರಲೇಬೇಕು. ಯಾಕಂದ್ರೆ ಇದು ನ್ಯಾಷನಲ್ ಇಶ್ಯು. ಒಂದು ವೇಳೆ ನಮಗೆ ಮೊದಲೇ ಗೊತ್ತಾದರೆ ಆ ಮಾಹಿತಿಯನ್ನು ಕೇಂದ್ರದವರಿಗೆ, NIAಗೆ ತಿಳಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

 

Share This Article
error: Content is protected !!
";