ಡಿನ್ನರ್ ಸಭೆ ರದ್ದಾಗಿಲ್ಲ, ಕೇವಲ ಮುಂದೂಡಲಾಗಿದೆ-ಗೃಹ ಸಚಿವ ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಹೈಕಮಾಂಡ್​ ನನಗೆ ಡಿನ್ನರ್ ಸಭೆ ಮುಂದೂಡುವಂತೆ ಸೂಚನೆ ನೀಡಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು
, ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ. ಸಭೆ ಮುಂದೂಡಿಕೆ ಮಾಡಲಾಗಿದೆ ಅಷ್ಟೆ. ಮುಂದೆ ನಾವು ಸಭೆ ನಡೆಸುತ್ತೇವೆ ಪರಮೇಶ್ವರ್ ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್​ಗೆ ದೂರು ನೀಡಿದ್ದಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್​​ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು.

ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.
ದಲಿತ ಸಮುದಾಯದ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಆಗಬೇಕಿದೆ. ಯಾರೂ ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಹೇಳಿಲ್ಲ. ನಮ್ಮ ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ ಎಂದು ಪರಮೇಶ್ವರ್ ತೀಕ್ಷ್ಣವಾಗಿ ತಿಳಿಸಿದರು.

ತಾತ್ಕಾಲಿಕವಾಗಿ ಸಭೆ ಮುಂದೂಡಲಾಗಿದೆ. ಸಭೆಯ ದಿನಾಂಕ ನಿಗದಿ ಆದಾಗ ಮತ್ತೆ ತಿಳಿಸುತ್ತೇವೆ. ಏನಾಗಿದೆ ಎಂದು ಎಲ್ಲವನ್ನೂ ಹೇಳಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಔತಣಕೂಟ ರದ್ದಲ್ಲ, ಮುಂದೂಡಿಕೆ ಮಾತ್ರ:
ಡಿನ್ನರ್ ಅಂದ್ರೆ ಏನೇನೋ ವ್ಯಾಖ್ಯಾನ ಮಾಡುತ್ತೀರಿ. ಊಟಕ್ಕೂ ಮೊದಲು ಚರ್ಚೆ ಮಾಡುತ್ತೇವೆ. ಸಭೆ ಇದ್ದಾಗ ಊಟ ಮಾಡುವುದು ಸಹಜ. ಚಿತ್ರದುರ್ಗದಲ್ಲಿ ನಡೆದಿದ್ದ ಎಸ್ಸಿ, ಎಸ್ಟಿ ಸಮಾವೇಶದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ನಾವು ಕರೆದಿದ್ದ ಸಭೆ(ಔತಣಕೂಟ)ಯನ್ನು ರದ್ದು ಮಾಡಿಲ್ಲ
, ಮುಂದೂಡಿಕೆ ಮಾಡಿದ್ದೇವೆ ಅಷ್ಟೆ. ನಮ್ಮ ಔತಣಕೂಟಕ್ಕೆ ಹೈಕಮಾಂಡ್ ವಿರೋಧ ಇಲ್ಲ. ಔತಣಕೂಟದ ಬಗ್ಗೆ ನಾವು ದೆಹಲಿಗೆ ಏನೂ ಹೇಳಿರಲಿಲ್ಲ.

ಶಾಸಕರ ಮೀಟಿಂಗ್ ಅಂದಾಗ ಅವರ ಗಮನಕ್ಕೆ ಹೋಗುತ್ತದೆ. ಹೀಗಾಗಿ ರಣದೀಪ್ ಸುರ್ಜೇವಾಲ ಕರೆ ಮಾಡಿ ಅವರೂ ಸಹ ಭಾಗವಹಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಹಾಗಾಗಿ ಅವರಿಗೂ ಆಹ್ವಾನ ಕೊಟ್ಟಿದ್ದೇವೆ. ಮುಂದೆ ಸಮಯ ನಿಗದಿ ಮಾಡುತ್ತೇನೆ ಎಂದು ನಮಗೆ ಹೇಳಿದ್ದಾರೆ. ಹಾಗಾಗಿ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಸ್ವಲ್ಪ ದಿನ ಕಾಯೋಣ, ಸಭೆ ಅವರಿಗೆ ಇಷ್ಟ ಇತ್ತೋ ಅಥವಾ ಇಲ್ಲವೋ ಎಂಬುದು ಎಲ್ಲವೂ ಗೊತ್ತಾಗುತ್ತದೆ ಎಂದು ಪರಮೇಶ್ವರ್ ಮಾರ್ಮಿಕವಾಗಿ ಹೇಳಿದರು.

ಇತ್ತೀಚೆಗಷ್ಟೇ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್​ನಲ್ಲಿ, ಮುಂದೆಯೂ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ಕಾಂಗ್ರೆಸ್​ನ ಕೆಲವು ಮೂಲಗಳು ಹೇಳಿವೆ. ಆದರೆ, ಪಕ್ಷದ ನಾಯಕರು ಇಂಥ ಊಹೆಗಳನ್ನು ಅಲ್ಲಗಳೆದಿದ್ದಾರೆ. ಹೊಸ ವರ್ಷದ ಸಂದರ್ಭ ಎಲ್ಲರೂ ಜತೆಯಾಗಿದ್ದೆವು ಅಷ್ಟೇ ಎಂದು ಹೇಳಿದ್ದರು.

ಆದರೆ, ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆಸಿದ್ದು, ಅವರ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಏತನ್ಮಧ್ಯೆ ಪರಮೇಶ್ವರ್ ಜನವರಿ 8ರಂದು ಡಿನ್ನರ್ ಮೀಟಿಂಗ್ ಕರೆದು ಮುಂದೂಡಿದ್ದಾರೆ. ಇದಕ್ಕೆ ಹೈಕಮಾಂಡ್​ ತಾತ್ಕಾಲಿಕ ಬ್ರೇಕ್ ಹಾಕಿದೆ. ಡಿಕೆ ಶಿವಕುಮಾರ್ ದೆಹಲಿಯಲ್ಲಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

- Advertisement -  - Advertisement - 
Share This Article
error: Content is protected !!
";