ಇಡಿ ದಾಳಿ, ಸಿಎಂ ಭೇಟಿ ಮಾಡಿದ ಗೃಹ ಸಚಿವ ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಸಚಿವ ಜಿ ಪರಮೇಶ್ವರ ಅವರು ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಯುತ್ತಿರುವ ನಡುವೆಯೇ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

- Advertisement - 

ಪರಮೇಶ್ವರ ಅವರು ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಚಿನ್ನದ ಕಳ್ಳಸಾಗಣೆ ದಂಧೆ ಸೇರಿದಂತೆ ಅಕ್ರಮ ಹಣಕಾಸು ವಹಿವಾಟು ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

- Advertisement - 

ಚಿನ್ನ ಕಳ್ಳ ಸಾಗಣೆ ಆರೋಪಿ, ನಟಿ ರನ್ಯಾರಾವ್ ಖಾತೆಗೆ ಹವಾಲಾ ಹಣ ವರ್ಗಾವಣೆ ಮಾಡಿದವರನ್ನು ಗುರಿಯಾಗಿಸಿಕೊಂಡು ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ರಾಜ್ಯದ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಇದರಲ್ಲಿ ಪರಮೇಶ್ವರ ಅವರಿಗೆ ಸಂಬಂಧಿಸಿದ ಮೂರು ಶಿಕ್ಷಣ ಸಂಸ್ಥೆಗಳೂ ಸೇರಿವೆ. ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಸೇರಿದಂತೆ ಮೂರು ಸಂಸ್ಥೆಗಳಿಗೆ ED ಅಧಿಕಾರಿಗಳು ಭೇಟಿ ನೀಡಿದ್ದು, ಕಳೆದ ಐದು ವರ್ಷಗಳ ಆರ್ಥಿಕ ದಾಖಲೆಗಳನ್ನು ಕೋರಿದ್ದಾರೆ ಎಂದು ಪರಮೇಶ್ವರ ತಿಳಿಸಿದ್ದಾರೆ.

- Advertisement - 

ಇಡಿ ದಾಳಿಯ ನಂತರ ಪರಮೇಶ್ವರ ಅವರ ಸದಾಶಿವನಗರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕ ಜೀವನದಲ್ಲಿ ನಾವೆಲ್ಲರೂ ಇದ್ದೇವೆ. ಅನೇಕ ಜನರು ಟ್ರಸ್ಟ್‌ಗಳನ್ನು ನಡೆಸುತ್ತಿದ್ದು, ಅವರು ಮದುವೆಗೆ ಹಣವನ್ನು ಉಡುಗೊರೆಯಾಗಿ ನೀಡಿರಬಹುದು. ಪರಮೇಶ್ವರ ಅವರಂತಹ ಪ್ರಭಾವಿ ನಾಯಕ ಕಳ್ಳಸಾಗಣೆಯಲ್ಲಿ ತೊಡಗಬಹುದೇ? ಎಂದು ಡಿಸಿಎಂ ಶಿವಕುಮಾರ್ ಅವರು ಮಾಧ್ಯಮದವರನ್ನೆ ಪ್ರಶ್ನಿಸಿದ ಪ್ರಸಂಗ ನಡೆಯಿತು.

ಮಾರ್ಚ್ 3 ರಂದು ರನ್ಯಾ ರಾವ್ ಅವರು ದುಬೈನಿಂದ ಬಂದ ನಂತರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು 14.2 ಕೆಜಿ ತೂಕದ 12.56 ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದರು.

Share This Article
error: Content is protected !!
";