ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್, ಮನಿಟ್ರ್ಯಾಪ್, ಜನರಿಗೆ ತೆರಿಗೆ ಟ್ರ್ಯಾಪ್ ಸೇರಿದಂತೆ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಿನೂತನ ರೀತಿಯಲ್ಲಿ ಹೋರಾಟ ಮಾಡಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ, ಏಪ್ರಿಲ್-12ರಂದು ಶನಿವಾರದಿಂದ ಆರಂಭವಾಗಿ ಹೋರಾಟವು ನಿರಂತರವಾಗಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ನಡೆಯಲಿದೆ. ಅಲ್ಲದೆ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎನ್ನುವ ಅಭಿಯಾನ ನಿರಂತರವಾಗಿ ನಡೆಯಲಿದೆ. ಜೊತೆಯಲ್ಲಿ ಪೋಸ್ಟರ್ ಅಭಿಯಾನ ಆರಂಭಿಸಲಾಗುತ್ತದೆ. ಸರ್ಕಾರದ ವಿರುದ್ಧ ನಗರಾದ್ಯಂತ ಪೋಸ್ಟರ್ ಅಂಟಿಸುವ ಮೂಲಕ ಜೆಡಿಎಎಸ್ ಪ್ರತಿಭಟನೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಹನಿಟ್ರ್ಯಾಪ್, ಮನಿ ಟ್ರ್ಯಾಪ್, ಜನರಿಗೆ ತೆರಿಗೆ ಟ್ರ್ಯಾಪ್ ಮಾಡಿದ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕರಿಗೆ ಬೇಡವಾಗಿದೆ. ವಿದ್ಯುತ್ ದರ ಶೇ.36 ರಷ್ಟು ಏರಿಕೆ, ಬಸ್ ದರ 15 ರಷ್ಟು ಏರಿಕೆ, ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪಗೂ ಫ್ರೀ ಎಂದು ಕಾಂಗ್ರೆಸ್ ಇಂದು ನಿರಂತರವಾಗಿ ವಿದ್ಯುತ್ ದರ ಏರಿಕೆ ಮಾಡಿದೆ. ಸಾರ್ವಜನಿಕ ಆಸ್ಪತ್ರೆಗಳ ಒಪಿಡಿ ಶುಲ್ಕವನ್ನು ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ನೋಂದಣಿ ಶುಲ್ಕ 10 ರೂ ನಿಂದ 400 ರೂ. ತನಕ ಏರಿಕೆ ಮಾಡಲಾಗಿದೆ. ಈ ಸರ್ಕಾರದಲ್ಲಿ ಉಸಿರಾಟಕ್ಕೆ ಅಗತ್ಯವಾಗಿ ಬೇಕಾಗಿರುವ ಗಾಳಿಗೂ ತೆರಿಗೆ ಹಾಕಿಲ್ಲ ಎನ್ನುವುದೇ ಸಂತಸದ ಸಂಗತಿ ಇದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಅಭಿನಂದಿಸುತ್ತೇನೆಂದು ಅವರು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 48 ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ದೂರಿದರು.
ದೇಶದಲ್ಲೇ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯನವರ ಸರ್ಕಾರ ನಂಬರ್- 1 ಸ್ಥಾನ ಪಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರೇ ಸ್ಪಷ್ಟಪಡಿಸಿದ್ದಾರೆ. ಮುಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ಎಮರ್ಜೆನ್ಸಿ ಡಿಕ್ಲೇರ್ ಮಾಡುವ ದಿನಗಳು ದೂರವಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡಿ ದಿವಾಳಿ ಆಗಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಹೇಳಿಕೆ ನೀಡಿ ಗ್ಯಾರಂಟಿ ಘೋಷಣೆ ಮಾಡಿದ್ದು ದಿವಾಳಿ ಆಗುತ್ತೋ ಎನ್ನುವ ಆತಂಕ ಸೃಷ್ಠಿಸಿದೆ ಎಂದು ಹೇಳಿದ್ದಾರೆ. 2.25 ಲಕ್ಷ ಕೋಟಿ ರೂ.ಸಾಲದ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಯಾತಕ್ಕಾಗಿ ಸಾಲ ಮಾಡಿದ್ದೀರಿ ಎನ್ನುವುದನ್ನ ರಾಜ್ಯ ಸರ್ಕಾರ ಹೇಳಬೇಕು. ರಾಜ್ಯದ ಜನತೆಗೆ ಸರ್ಕಾರ ಉತ್ತರ ನೀಡಲಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹ ಮಾಡಿದ್ದಾರೆ.
“ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ‘ ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹಾಡನ್ನು ಬಿಡುಗಡೆ ಮಾಡಲಾಗಿದೆ. ಮೂರು ನಿಮಿಷಗಳ ಹಾಡಿನಲ್ಲಿ ಸರ್ಕಾರದ ವಿರುದ್ಧ ಲೇವಡಿ ಮಾಡಲಾಗಿದೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಪೋಸ್ಟರ್ ಸ್ಕ್ಯಾನ್ ಮಾಡಿದರೆ ಬೆಲೆ ಏರಿಕೆ ಬಗ್ಗೆ ಸರ್ಕಾರದ ವಿರುದ್ಧ ಹಾಡು ಕೇಳಿ ಬರುತ್ತಿದೆ. ಬೆಲೆ ಏರಿಕೆ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏ.12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಜೆಡಿಎಸ್ ನಿರ್ಧರಿಸಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ ಎಂಬ ಸತ್ಯವನ್ನು ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ , ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್‌ಶಾಸಕ ಬಸವರಾಜ ರಾಯರೆಡ್ಡಿ ಅವರೇ ಒಪ್ಪಿಕೊಂಡಿದ್ದಾರೆ. ಪ್ರತಿಯೊಂದರಲ್ಲೂ 60% ಕಮಿಷನ್‌ಲೂಟಿ ಹೊಡೆದು ರಾಜ್ಯವನ್ನು ದಿವಾಳಿ ಮಾಡುತ್ತಿರುವ ಭ್ರಷ್ಟ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದುರಾಡಳಿತಕ್ಕೆ ಹೇಳಿಕೆಯೇ ಪುಷ್ಟೀಕರಿಸಿದೆ ಎಂದು ಅವರು ಟೀಕಾಪ್ರಹಾರ ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರ ಕುರಿತು ನನ್ನ ಅಭಿಪ್ರಾಯ ಇದೇ ಇರುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿನಬೆಳಗಾದರೆ ಒಂದೊಂದು ಹಗರಣಗಳು, ವಾಲ್ಮೀಕಿ ಹಗರಣ, ಮುಡಾ ಹಗರಣ, ಸ್ಮಾರ್ಟ್‌ಮೀಟರ್‌ಟೆಂಡರ್ ಹಗರಣ, ವರ್ಗಾವಣೆ ದಂಧೆ, ಸಚಿವರ ಭ್ರಷ್ಟಾಚಾರಕ್ಕೆ ಆಡಿಯೋ ಸಾಕ್ಷಿಗಳು ಸಾಕಷ್ಟಿವೆ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್‌ಸರ್ಕಾರದ ಭ್ರಷ್ಟಾಚಾರಗಳನ್ನು ಬೆತ್ತಲುಗೊಳಿಸುತ್ತಲೇ ಇದೆ ಎಂದು ಹೇಳಿದರು.
ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಪದ ಬಳಸಿದ್ದಕ್ಕೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅಸಮಾಧಾನಗೊಂಡರಲ್ಲದೆ ತಮ್ಮ ಪಕ್ಷದ ಬಗ್ಗೆ ವಿಸ್ತೃತವಾಗಿ ಹೇಳಿದರು. ಹೆಚ್ಡಿ ದೇವೇಗೌಡರು ಕಟ್ಟಿದ್ದ ಪಕ್ಷ ಈಗಲೂ ಕರ್ನಾಟಕದಲ್ಲಿ ಬಲಿಷ್ಠವಾಗಿದೆ, ರಾಜ್ಯದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ವೋಟ್ ಶೇರ್ 18 ರಿಂದ 20 ಪರ್ಸೆಂಟ್ ನಷ್ಟಿದೆ, ಹಳೆ ಮೈಸೂರು ಭಾಗದಲ್ಲಿ ಅದು ಶೇಕಡ 34 ರಷ್ಟಿದೆ, ಕಿತ್ತೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ದುರ್ಬಲವೇನೂ ಅಲ್ಲ ಎಂದು ಹೇಳಿದರು.
ಜೆಡಿಎಸ್ ಪಕ್ಷವು ಬಿಜೆಪಿ ಜತೆ ಮೈತ್ರಿ ಹೊಂದಿದೆಯೇ ಹೊರತು ಅದರ ಜೊತೆ ವಿಲೀನಗೊಳ್ಳುವುದಿಲ್ಲ ಎಂದು ನಿಖಿಲ್ ಹೇಳಿದರು.
ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸಂಸದರಾದ ಎಂ. ಮಲ್ಲೇಶ್‌ಬಾಬು, ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್‌ಬಾಬು ಸಿ.ಬಿ., ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರ್, ಮಾಜಿ ಸಚಿವರಾದ ವೆಂಕಟರಾವ್‌ನಾಡಗೌಡ, ಶಾಸಕರಾದ ಎಚ್.ಟಿ. ಮಂಜುನಾಥ್, ಸ್ವರೂಪ್‌ಪ್ರಕಾಶ್, ವಿಧಾನ ಪರಿಷತ್‌ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರಾದ ರಮೇಶ್‌ಗೌಡ ಹೆಚ್.ಎಂ. ಅವರು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.