ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿಗಳು ತಮ್ಮ ಕ್ಯಾಬಿನೆಟ್‌ಸಚಿವರ ಗೌರವ ಕಾಪಾಡಬೇಕು. ಹನಿಟ್ರ್ಯಾಪ್‌ದಂಧೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಹನಿಟ್ರ್ಯಾಪ್‌ದಂಧೆಯಲ್ಲಿ ನ್ಯಾಯಾಧೀಶರನ್ನು, ರಾಜಕೀಯ ನಾಯಕರನ್ನೂ ಬೀಳಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಹೀಗಾಗಿ ಹಾಲಿ ಹೈಕೋರ್ಟ್‌ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹ ಮಾಡಿದರು.
ಮುಖ್ಯಮಂತ್ರಿ ಪದವಿಗೋ, ರಾಜಕೀಯ ಹಿತಾಸಕ್ತಿಗೋ ಇಷ್ಟು ಕೀಳು ಮಟ್ಟಕ್ಕೆ ಯಾರೂ ಇಳಿಯಬಾರದು ಪ್ರತಿಪಕ್ಷ ನಾಯಕ ಅಶೋಕ್ ಸಲಹೆ ನೀಡಿದ್ದಾರೆ.
ದಲಿತ ಸಚಿವರೊಬ್ಬರು ತಮ್ಮ ಮೇಲೆ ನಡೆಯುತ್ತಿರುವ ಹನಿಟ್ರ್ಯಾಪ್ ಪ್ರಯತ್ನಗಳ ಬಗ್ಗೆ ಅಸಹಾಯಕರಾಗಿ ಸದನದಲ್ಲಿ ಹಂಚಿಕೊಂಡು ಸರ್ಕಾರದ ರಕ್ಷಣೆ ಕೋರಿದರೆ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ತಮ್ಮ ಎಂದಿನ ನಟ್ಟು-ಬೊಲ್ಟು ಟೈಟು ಮಾಡುವ ಧಾಟಿಯಲ್ಲಿ, “ಹಲೋ ಎಂದರೆ ಹಲೋ ಎನ್ನುತ್ತಾರೆ”, “ಮಾಡಿದ್ದುಣ್ಣೋ ಮಹರಾಯ” ಎಂದು ಸಚಿವರ ಮೇಲೆಯೇ ಗೂಬೆ ಕೂರಿಸುವ ಅರ್ಥದಲ್ಲಿ ಮಾತಾಡಿದ್ದಾರೆ.
ನಮ್ಮ ರಾಜ್ಯದಲ್ಲಿ ಒಬ್ಬ ಹಿರಿಯ ಶಾಸಕರು, ಹಾಲಿ ಸಚಿವರಿಗೇ ರಕ್ಷಣೆ ಇಲ್ಲ ಅಂದ ಮೇಲೆ ಈ ಹನಿಟ್ರ್ಯಾಪ್ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಯಾವ ರಕ್ಷಣೆ ಇದೆ? ಎಂದು ಆರ್ ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಒಬ್ಬ ಹಾಲಿ ಸಚಿವರು ತಮ್ಮ ಮೇಲೆ ಎರೆಡೆರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ಆಗಿದೆ, ಅದಕ್ಕೆ ತಮ್ಮ ಬಳಿ ಪುರಾವೆಯೂ ಇದೆ ಎಂದು ಸ್ವತಃ ಅವರೇ ವಿಧಾನಸಭೆ ಕಲಾಪದಲ್ಲಿ ಬಹಿರಂಗವಾಗಿ ಒಪ್ಪಿಕೊಂಡು ತನಿಖೆಗೆ ಆಗ್ರಹ ಮಾಡಿರುವುದು ಅತ್ಯಂತ ಗಂಭೀರವಾದ ವಿಷಯ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸರ್ಕಾರದ ಒಬ್ಬ ಹಿರಿಯ ಸಚಿವರು ಹಾಗು ಅವರ ಕುಟುಂಬ ಸದಸ್ಯರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಮಾಡುತ್ತಿರುವವರು ಯಾರು? ಈ ಹನಿಟ್ರ್ಯಾಪ್ ಹಿಂದಿರುವ ಉದ್ದೇಶವಾದರೂ ಏನು? ಹನಿ ಟ್ರ್ಯಾಪ್ ಬಗ್ಗೆ ಆರೋಪ ಮಾಡಿರುವ ಸಚಿವರಾದ ರಾಜಣ್ಣ ಅವರು, ಈ ಬಗ್ಗೆ ತನಿಖೆ ಆಗಬೇಕು ಎಂದು ಅವರ ಮನವಿಗೆ ದನಿಗೂಡಿಸಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಹಾಗೂ ಸಚಿವ ಮಹದೇವಪ್ಪನವರು, ಎಲ್ಲರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಹಿರಿಯ ಸಚಿವರು. ಹಾಗಾದರೆ ಈ ಹನಿಟ್ರ್ಯಾಪ್ ಹಿಂದೆ ಪರಿಶಿಷ್ಟ ಸಮುದಾಯದ ಸಚಿವರನ್ನು ರಾಜಕೀಯವಾಗಿ ತುಳಿಯುವ, ತೇಜೋವಧೆ ಮಾಡುವ ಹುನ್ನಾರ ಅಡಗಿದೆಯೇ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದರು.
ಹನಿಟ್ರ್ಯಾಪ್ ಮೂಲಕ ಸರ್ಕಾರದ ಒಂದು ವಿಕೆಟ್ ಉರುಳಿಸುವುದು ಇದರ ಹಿಂದಿರುವ ಉದ್ದೇಶ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿಕೆಟ್ ಉರುಳಿಸಲು ಹತಾಶೆಯಿಂದ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿರುವವರು ಯಾರು? ಅವರು ಇದರಿಂದ ಸಾಧಿಸಲು ಹೊರಟಿರುವುದಾದರೂ ಏನು? ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಂದು ನಿಷ್ಪಕ್ಷಪಾತ, ಪಾರದರ್ಶಕ ತನಿಖೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆರ್.ಅಶೋಕ್ ಆಗ್ರಹ ಮಾಡಿದರು.