ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್ಗೆ ಸಂಬಂಧಪಟ್ಟಂತೆ ಯಾರನ್ನೂ ರಕ್ಷಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ವಿಷಯದಲ್ಲಿ ಯಾರು ತಪ್ಪತಸ್ಥರುರಾಗಿರುವರೋ ಅವರನ್ನು ಕಾನೂನಿನ ರೀತ್ಯ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ವಿಧಾನಸಭೆಯ ಸದನದಲ್ಲಿ ಹನಿಟ್ರ್ಯಾಪ್ ವಿಷಯವನ್ನು ವಿರೋಧಪಕ್ಷದ ನಾಯಕರು ಹಾಗೂ ಇನ್ನಿತರ ಶಾಸಕರು ಪ್ರಸ್ತಾಪಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು, ಯಾರೇ ಕಾರಣರಾದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಇದು ಸದನದಲ್ಲಿ ಪ್ರಸ್ತಾಪವಾದ ವಿಷಯವಾದ್ದರಿಂದ ಸದನದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಕೋರಿದರು.
ನಿನ್ನೆ ಸದನದಲ್ಲಿ ರಾಜಣ್ಣ ಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಗೃಹ ಮಂತ್ರಿಗಳು ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದು ಒಂದು ಗಂಭೀರವಾದ ವಿಷಯವಾದ್ದರಿಂದ ದೂರು ನೀಡಿದಲ್ಲಿ ದೂರಿನಲ್ಲಿರುವ ಅಂಶಗಳ ಮೇಲೆ ಸೂಕ್ತ ಕ್ರಮ ವಹಿಸಬೇಕಾಗುತ್ತದೆ ಎಂದರು.
ಈ ಪ್ರಕರಣ ಕೇವಲ ಒಬ್ಬರಿಗೆ ಸೀಮಿತವಲ್ಲ, ಯಾವುದೇ ಪಕ್ಷದ ಶಾಸಕರಾಗಲಿ, ಸಚಿವರಾಗಲಿ ಈ ಪ್ರಕರಣದಲ್ಲಿ ಸಿಲುಕಿದ್ದರೆ ಅವರಿಗೆ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದರು. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ, ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ದೂರು ದಾಖಲಾದಲ್ಲಿ ಇದರ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ತಿಳಿಸಿದರು.