ಕನ್ನಡ ಭವನ ನಿರ್ಮಾಣಕ್ಕೆ ಭರವಸೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಒದಗಿಸಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಲ್ಮಿಡಿ ಶಾಸನ ಉದ್ಘಾಟನೆ ನೆರವೇರಿಸಿದ ನಂತರ ಕಸಾಪ ಪದಾಧಿಕಾರಿಗಳ ಜೊತೆ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕನ್ನಡ ಭವನ ಜಿಲ್ಲೆಯ ಸಾಹಿತ್ಯಾಸಕ್ತರ ದಶಕಗಳ ಕನಸಾಗಿದೆ. ಪರಿಷತ್ತಿಗೆ ಪಿಳ್ಳೇಕೇರನಹಳ್ಳಿಯ ಬಾಪೂಜಿ ಕಾಲೇಜಿನ ಬಳಿ ವಿಶಾಲವಾದ ನಿವೇಶನವಿದೆ. ಆದರೆ ಕಟ್ಟಡಕ್ಕೆ ಅನುದಾನವಿಲ್ಲ.
ಹೀಗಾಗಿ ಅಂದಾಜು ೩ ಕೋಟಿ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಆದ್ಯತೆಯ ಮೇಲೆ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ಅನುದಾನ ಕೇಳಲಾಗುವುದು. ಜೊತೆಗೆ ಡಿಎಂಎಫ್ ಸೇರಿದಂತೆ ನಾನಾ ಇಲಾಖೆಗಳಿಂದ ಅನುದಾನ ಒದಗಿಸಲು ಪ್ರಯತ್ನ ನಡೆಸಲಾಗುವುದು. ಕನ್ನಡ ಭವನಕ್ಕೆ ಪ್ಲಾನ್ ಮತ್ತು ಎಸ್ಟಿಮೇಟ್ ತಯಾರಿಸಲು ಸೂಚಿಸಿದರು.
ಚಿತ್ರದುರ್ಗ ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್, ಕಾರ್ಯದರ್ಶಿ ವಿ.ಶ್ರೀನಿವಾಸ ಖಜಾಂಚಿ ಸಿ.ಲೋಕೇಶ ಮತ್ತಿತರರಿದ್ದರು.