ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ಹೊರಕೆರೆದೇವರಫುರ ಒಂದು ಪುಣ್ಯ ಕ್ಷೇತ್ರ. ಈ ಪುಣ್ಯಕ್ಷೇತ್ರದಲ್ಲಿ ನಮ್ಮ ಮನೆ ದೇವರಾದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಭವ್ಯವಾದ ದೇವಾಲಯವಿದೆ.
ಚಿತ್ರದುರ್ಗಕ್ಕೆ ಕೇವಲ 28 ಕಿ ಮೀ ದೂರದಲ್ಲಿದೆ, ಈ ಬೃಹತ್ ದೇವಾಲಯವನ್ನು ಶಾಲಿವಾಹನ ಶಕ 1348ನೆಯ ಬಹುಧಾನ್ಯ ಸಂವತ್ಸರದಲ್ಲಿ ಗರ್ಭಗುಡಿಯನ್ನು ದುಮ್ಮಿ ವಿರಪ್ಪನಾಯಕ ನಿರ್ಮಿಸಿದ್ದಾನೆ. ದಕ್ಷಿಣ ಭಾರತದಲ್ಲಿಯೇ ಇದೊಂದು ಸುಪ್ರಸಿದ್ಧಿ ಪಡೆದ ಶ್ರೀವೈಷ್ಣವ ಕ್ಷೇತ್ರವಾಗಿದೆ. ಶ್ರೀ ಸ್ವಾಮಿಯ ದಿವ್ಯ ಸನ್ನಿಧಿಯಿಂದ ಭೂವೈಕುಂಠವೇ ಆಗಿದೆ.
ಭಗವಂತನು ಈ ಪುಣ್ಯ ಸ್ಥಳದಲ್ಲಿ ಬಂದು ನೆಲೆಸಲು ಕಾರಣ ಇದಾಗಿದೆ.
ಹಿಂದೆ ಇಲ್ಲಿ ನಂದರಾಯರೆಂಬ ರಾಜನು ಆಳುತ್ತಿದ್ದನು ಈತ ದುಷ್ಟನು ಪ್ರಜಾಪೀಡಕನು ಆಗಿದ್ದನು. ಒಮ್ಮೆ ಈ ನಂದಗಿರಿಯಲ್ಲಿದ್ದ ದೇವಾಂಗ ವಂಶದವನಾದ ರಂಗದಾಸನು ತಿರುಪತಿಗೆ ಯಾತ್ರೆ ಹೋಗಿಬರುವ ಸಂಕಲ್ಪದಿಂದ ಒಂದು ಸಹಸ್ರಕಂಬೀ ವಸ್ತ್ರವನ್ನು ನೇಯ್ದು ತಿರುಪತಿ ತಿಮ್ಮಪ್ಪನಿಗೆ ಅದನ್ನು ಅರ್ಪಿಸುವ ಹರಕೆ ಹೊತ್ತಿರುತ್ತಾನೆ, ಆ ಹರಕೆಗಾಗಿ ಶ್ರದ್ದಾಭಕ್ತಿಯಿಂದ ಮೀಸಲು ವಸ್ತ್ರವನ್ನು ನೇಯುತ್ತಾನೆ, ದೂರದ ಈ ತಿರುಪತಿ ಯಾತ್ರೆಗೆ ಹೋಗಿಬರುವ ವೆಚ್ಚಕ್ಕಾಗಿ ತಾನು ನೇಯ್ದೆ ಇತರ ವಸ್ತ್ರಗಳನ್ನು ಮಾರುತ್ತ ನಂದರಾಯನ ಆಸ್ಥಾನಕ್ಕೂ ಬರುತ್ತಾನೆ.
ಆದರೆ ನಂದರಾಯನು ಆ ಮಿಸಲಿನ ವಸ್ತ್ರವನ್ನು ಕಂಡು ಆಕರ್ಷಿತನಾಗಿ ಆ ವಸ್ತ್ರವನ್ನೇ ಕೆದಕಿ ಕೇಳುತ್ತಾನೆ, ರಂಗದಾಸನು ಆ ವಸ್ತ್ರವನ್ನು ಕೊಡುವುದಿಲ್ಲ, ಇದು ತಿರುಪತಿ ತಿಮ್ಮಪ್ಪನಿಗೆ ಹರಕೆ ಸಲುವಾಗಿ ನೇಯ್ದ ಮೀಸಲು ವಸ್ತ್ರ, ಇದನ್ನು ಯಾರಿಗೂ ಕೊಡುವುದಿಲ್ಲಾ ಎಂದು ಹೇಳಿದರು ನಂದರಾಜನು ವಸ್ತ್ರವನ್ನು ಬಲಾತ್ಕಾರದಿಂದ ಪಡೆದು ಚರ್ಮದಿಂದ ಮುದ್ರಿಸಿದ ರಾಜಮುದ್ರೆಯ ನಾಣ್ಯಗಳನ್ನು ಕೊಟ್ಟು ದುಡುತ್ತಾನೆ.
ವಿದಿಯಿಲ್ಲದೆ ರಂಗದಾಸ ಕಷ್ಟದಿಂದ ಯಾತ್ರೆ ಹೊರಟು ತಿರುಪತಿಯನ್ನು ಸೇರುತ್ತಾನೆ. ಅಲ್ಲಿ ತನ್ನ ಪೂಜಾದಿಗಳನ್ನು ಸಲ್ಲಿಸುತ್ತಾನೆ, ನಂತರ ನಂದ =ರಾಜರು ನೀಡಿದ್ದು ಚರ್ಮದ ನಾಣ್ಯಗಳು ಎಂದು ತಿಳಿಯದ ರಂಗದಾಸರು, ಆ ನಾಣ್ಯಗಳನ್ನು ದೇವರ ಹುಂಡಿಗೆ ಅರ್ಪಿಸುತ್ತಾರೆ.
ಆಗ ಸ್ವಾಮಿ ಕೋಪಿತ ಗೊಳ್ಳುತ್ತಾನೆ ಚರ್ಮದ ನಾಣ್ಯದಿಂದ ಅಪವಿತ್ರತೆ ಹಾಗು ರಂಗದಾಸನ ಹರಕೆ ನಿಯಮಕ್ಕೆ ಭಂಗತಂದ ನಂದರಾಜನ್ನು ದಹಿಸಲು ತಿರುಪತಿಯಿಂದ ಆಗಮಿಸಿದ ಶ್ರೀ ಸ್ವಾಮಿಯು ನಂದನಗರಿಯ ಬಳಿಯ ಕೃಷ್ಣಾಚಲ (ಈಗಿನ ಕರೆಕಲ್ಲು) ಗೆ ಬಂದು ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು, ಎದುರಿನಲ್ಲಿಯೇ ಕಾಣುವ ನಂದನಗರಿಯನ್ನು ತನ್ನ ತೀಷ್ಣ ದೃಷ್ಠಿಯಿಂದ ನೋಡುತ್ತಾನೆ, ಸ್ವಾಮಿಯ ನೋಟಕ್ಕೆ ಇಡೀ ನಂದನಗರಿಯು ಕ್ಷಣಮಾತ್ರದಲ್ಲಿ ಬೆಂಕಿಯಲ್ಲಿ ದ್ವಂಸವಾಗುತ್ತದೆ, ನಂದರಾಯನು ತನ್ನ ಅರಮನೆಯೊಂದಿಗೆ ನಿರ್ನಾಮವಾಗುತ್ತಾನೆ.
ನಂದನಗರಿಯು ಉರಿಯುವ ಈ ಸಂದರ್ಭದಲ್ಲಿ ಅದೇ ನಗರದಲ್ಲಿದ್ದ ಓರ್ವ ಸಾಧ್ವಿಯೊಬ್ಬಳು ಅಗ್ನಿಪ್ರಳಯವನ್ನು ಕಂಡು ಶ್ರೀ ವೆಂಕಟೇಶನನ್ನು ಭಾಜಿಸುತ್ತಾ ಕೃಷ್ಣಾಚಲಕ್ಕೆ ಅಭಿಮುಖವಾಗಿ ಕರ್ಪೂರ ದಿಂದ ಆರತಿ ಎತ್ತಿ ಬೆಳಗುತ್ತಾಳೆ, ಆ ಭಕ್ತೆಯ ಭಕ್ತಿಗೆ ಸಿಲುಕಿ ಉಗ್ರಮೂರ್ತಿ ಯಾಗಿದ್ದ ಸ್ವಾಮಿಯು ಶಾಂತಮೂರ್ತಿ ಯಾಗುತ್ತಾನೆ. ಆಗ ಉರಿಯುತ್ತಿದ ನಂದನಗರಿ ತಕ್ಷಣ ತಣ್ಣಗಾಗುತ್ತದೆ, ಅನಂತರ ಶ್ರೀ ಸ್ವಾಮಿಯು ಕೃಷ್ಣಾಚಲದಿಂದ ಬಂದು ನಂದನಗರಿಯ ಕೆರೆಯ ಹೊರಭಾಗದಲ್ಲಿದ್ದ ಒಂದು ಹುತ್ತದಲ್ಲಿ ಭಕ್ತೋದ್ದಾರಕ್ಕಾಗಿ ನೆಲೆಸಿದನೆಂದು ಪ್ರತೀತಿ ಇದೆ.
ಈ ಹುತ್ತಕ್ಕೆ ಹತ್ತಿರದ ಮತಿಘಟ್ಟ ಗ್ರಾಮದ ಗೌಡರ ಮನೆಯ ಒಂದು ಹಸುವು ನಿತ್ಯವೂ ಮನೆಯಲ್ಲಿ ತನ್ನ ಕರುವಿಗೂ ಹಾಲುಣಿಸದೆ ಈ ಹುತ್ತಕ್ಕೆ ಕ್ಷಿರಾಭಿಷೇಕ ಮಾಡುತ್ತಿತ್ತು , ಈ ದ್ಯೆವಲಿಲೆಯನ್ನು ಕಣ್ಣಾರೆ ಕಂಡು ಬೆರಗಾದ ಗೌಡನು ಸ್ವಾಮಿಯ ಆದೇಶದಂತೆ ಅಲ್ಲಿ ಗುಡಿ ಕಟ್ಟಿಸಿದನೆಂದೂ ಪ್ರತೀತಿಯಿದೆ.
ಅಂದಿನ ಚಿಕ್ಕ ದೇವಾಲಯ ಇಂದು ಬೃಹತ್ ದೇವಾಲಯವಾಗಿದೆ. ನಂದನಗರಿಯ ಕೆರೆಯ ಹೊರಭಾಗದ ಹುತ್ತದಲ್ಲಿ ಭಗವಂತನು ನೆಲೆಸಿರುವುದರಿಂದ “ಹೊರಕೆರೆದೇವರಫುರ” ಎಂದು ಹೆಸರು ಬಂದಿದೆ. ಆದರಿಂದ ಭಕ್ತರು “ಹೊರಕೆರೆ ರಂಗಪ್ಪ” ಎಂಬ ನಾಮ ದಿಂದ ಸ್ವಾಮಿಯನ್ನು ಕರೆಯುತ್ತಾರೆ.
ಅಗ್ನಿಗಾಹುತಿ ಯಾಗಿದ್ದ ನಂದನಗರಿ ಹೊಸದಾಗಿ ಬೆಳೆದುದರಿಂದ ಅದಕ್ಕೆ ನಂದನಹೊಸೂರು ಎಂದು ಹೆಸರು ಬಂದಿದೆ, ಈ ಊರಿನ ಬಾಸಿಂಗದ ಮನೆತನದವರೇ ಇಂದಿಗೂ ಪ್ರತಿವರ್ಷ ಜಾತ್ರೆಯಲ್ಲಿ ಸ್ವಾಮಿಗೆ ಬಾಸಿಂಗ ತಂದು ಒಪ್ಪಿಸುತ್ತಾರೆ, ಮತಿಘಟ್ಟದ ಗೌಡರ ಮನೆಯವರದೇ ಜಾತ್ರೆಯಲ್ಲಿ ಸ್ವಾಮಿಗೆ ಮೊದಲ ಮೀಸಲು ಅರ್ಪಿತವಾಗುತ್ತದೆ.
ಭಗವಂತನು ಭಕ್ತರ ಉದ್ದರಾಕ್ಕಾಗಿ ತಿರುಪತಿಯಿಂದ ಕೇವಲ 3 ಹೆಜ್ಜೆಗಳಲ್ಲಿ ಇಲ್ಲಿಗೆ ಬಂದನು ಯಂಬುದು ನಂಬಿಕೆ. ಹೊರಕೆರೆದೇವರಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಗರ್ಭಗುಡಿಯೆಲ್ಲವು ಹುತ್ತಮಯ ವಾಗಿದ್ದು, ಚೋಳರ ವಾಸ್ತು ಶಿಲ್ಪದ ವಿನ್ಯಾಸ ಹೊ೦ದಿರುವ ಪುರಾತನವಾದ ದೇವಾಲಯವಾಗಿದೆ.
ದೇವಸ್ತಾನದ ಗೋಪುರದಲ್ಲಿರುವ ಬಾಗಿಲುಗಳನ್ನು ಹಿಂದೂ, ಮುಸ್ಲಿಂ, ಜೈನ ಧರ್ಮಗಳ ಅನುಗುಣವಾಗಿ ಫಟ್ಟಿಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದೊಳಗೆ ಗರುಡ ಸನ್ನಿಧಿ, ಬಾಣದೇವರ ಸನ್ನಿಧಿ, ಅಂಜನೇಯ ಸನ್ನಿಧಿ, ಶಂಕರ-ನಾರಾಯಣ ಸನ್ನಿಧಿ, ಮಹಾಲಕ್ಷ್ಮಿ ಸನ್ನಿಧಿ, ಶ್ರೀಪಾದ ಸನ್ನಿಧಿ, ಬೃಂದಾವನ, ವೇಣುಗೋಪಾಲ ಸನ್ನಿಧಿ, ಬ್ಯೆರವೇಶ್ವರ ಸನ್ನಿಧಿ, ಭೂತದೇವರ ಸನ್ನಿಧಿ, ಗಣೇಶ ಸನ್ನಿಧಿ, ಮೊದಲಾದವೂ ಉಂಟು.
ದೇವಾಸ್ತಾನದ ಆಗ್ನೇಯ ಭಾಗದಲ್ಲಿ ಪರಮ ಪವಿತ್ರವಾದ ಕಲ್ಯಾಣಿ ಇದೆ, ಈ ಕ್ಷೇತ್ರಕ್ಕೆ ಬಂದ ಯಾತ್ರಾರ್ಥಿಗಳು ಮೊದಲು ಈ ಪರಮಪವಿತ್ರ ಕಲ್ಯಾಣಿಯಲ್ಲಿ ಸ್ನಾನಗೈದು ಅನಂತರ ದೇವರ ದರ್ಶನಕ್ಕೆ ಬರುತ್ತಾರೆ. ಈ ದೇವಸ್ಥಾನವು ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೂ ಸೇರಿದ್ದು, ಈ ಕ್ಷೇತ್ರಕ್ಕೆ ಬರುವ ಭಕ್ತರಿಗೆಲ್ಲ ಪ್ರತಿ ಶನಿವಾರವೂ ಊಟದ ವ್ಯವಸ್ಥೆ ಇದ್ದು, ಪವಿತ್ರವಾದ ಪುಣ್ಯ ಕ್ಷೇತ್ರವಾಗಿದೆ. ಇದು ಹೊರಕೆರೆರಂಗಪ್ಪನ ಭಂಡಾರದ ಬರಹಗಳು.
ಸಂಗ್ರಹ ಲೇಖನ-ರಘುಗೌಡ