ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಟಾಟಾ ಏಸ್ ಹಾಗೂ ಬೈಕ್ ಗಳ ಮುಖಾಂತರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಬೆಲಗೂರು ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಬೆಲಗೂರು ಗ್ರಾಮದ ಮಾರುತಿ (24) ಮತ್ತು ಪ್ರಕಾಶ (25) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಬೆಲಗೂರಿನಿಂದ ಬೈಕ್ ನಲ್ಲಿ ಹೊಸದುರ್ಗ ಕಡೆ ಹೊರಟ ಇಬ್ಬರು ಯುವಕರು ಮತ್ತೂರು ಬಳಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ವೇಗವಾಗಿ ಚಲಿಸಿದ್ದಾರೆ. ಅದೇ ವೇಳೆ ತೆಂಗಿನ ಮೊಟ್ಟೆ ತುಂಬಿಕೊಂಡು ಕಬ್ಬಳ ಗ್ರಾಮದಿಂದ ಬೆಲಗೂರು ಸಮೀಪದ ತೆಂಗಿನ ನಾರಿನ ಮಿಲ್ ಗೆ ಬರುತ್ತಿದ್ದ ಟಾಟಾ ಏಸ್ ಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.
ನೆಲಕ್ಕೆ ಬಿದ್ದ ಈ ಇಬ್ಬರು ಯುವಕರನ್ನು ಬೆಲಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸುವ ಮುನ್ನ ದಾರಿ ಮದ್ಯೆ ಅಸು ನೀಗಿದ್ದಾರೆ ಎನ್ನಲಾಗಿದೆ.
ಯುವಕರು ಹೆಲ್ಮೆಟ್ ಧರಿಸದೆ ಇದ್ದಿದ್ದರಿಂದ ತಲೆಗೆ ಬಲವಾಗಿ ಪೆಟ್ಟು ಬಿದ್ದು ಸಾವನ್ನಪ್ಪಲು ಕಾರಣ ಎನ್ನಲಾಗುತ್ತಿದೆ. ಈ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.