ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ರೈತನ ಮೇಲೆ ಕರಡಿ ಭೀಕರವಾಗಿ ದಾಳಿ ನಡೆಸಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ದಾಳಿಯಲ್ಲಿ ರೈತನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ರವಾನೆ ಮಾಡಲಾಗಿದೆ.
ಕರಡಿ ದಾಳಿಗೆ ಒಳಗಾದ ರೈತನನ್ನು ರಾಯಪ್ಪ (50) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಏಕಾಏಕಿ ಎದುರಾದ ಕರಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಕರಡಿ ರಾಯಪ್ಪ ಅವರ ಕಣ್ಣು ಹಾಗೂ ಕಿವಿ ಭಾಗಕ್ಕೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರೈತನ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ನೆರವಿಗೆ ಬಂದಿದ್ದಾರೆ ಎನ್ನಲಾಗಿದೆ.
ಗಾಯಾಳು ರಾಯಪ್ಪ ಅವರನ್ನು ತಕ್ಷಣ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ರವಾನೆ ಮಾಡಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಕರಡಿ ಸಂಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

