ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಾಸ್ಟೆಲ್ ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗಗಳು ಹರಡದಂತೆ ವೈಯಕ್ತಿಕ ಸ್ವಚ್ಛತೆ ಕಡೆ ಗಮನಹರಿಸಬೇಕು ಎಂದುದ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಕರೆ ನೀಡಿದರು.
ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ ಏರ್ಪಡಿಸಿದ್ದ ಆರೋಗ್ಯ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೌತಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಸ್ನಾನ ಮಾಡುವುದು, ಲಘು ವ್ಯಾಯಮ, ಬಟ್ಟೆ ಹಾಸಿಗೆ ಪರಿಕರ ಸ್ವಚ್ಚವಾಗಿ ಇಟ್ಟುಕೊಳ್ಳಲು ಅಸಡ್ಡೆ ತೋರಬಾರದು. ಕಜ್ಜೆ, ಇತರೆ ಚರ್ಮ ಕಾಯಿಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಲು ವೈಯಕ್ತಿಕ ಸ್ವಚ್ಛತೆ ಅಗತ್ಯವಾಗಿ ನಿರ್ವಹಿಸಿಕೊಳ್ಳಬೇಕು. ಸರ್ಕಾರ ಎಲ್ಲರಿಗೂ ಸಾಬೂನು ನೀಡಿರುತ್ತದೆ. ಹಲ್ಲುಗಳನ್ನು ಸ್ವಚ್ಚ ಮಾಡಿಕೊಳ್ಳಲು ಬ್ರಷ್, ಪೇಸ್ಟ್ ನೀಡಿದ್ದು, ಪ್ರತಿನಿತ್ಯ ಕನಿಷ್ಟ 2 ಬಾರಿಯಾದರೂ ಹಲ್ಲುಗಳ ಸ್ವಚ್ಛತೆ ಮಾಡಿಕೊಂಡು ಬಾಯಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರತಿನಿತ್ಯ ವ್ಯಾಯಮ ಮಾಡಿ, ಶೌಚಾಲಯ ಬಳಸಿ. ಶೌಚದ ನಂತರ ಊಟಕ್ಕೆ ಮೊದಲು ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ಮಾಡಿ. ನಿಮ್ಮ ಬೆರಳಿನ ಉಗುರನ್ನು ವಾರಕ್ಕೊಮ್ಮೆ ಟ್ರಿಮ್ ಮಾಡಿ, ತಲೆ ಕೂದಲನ್ನು ನಿತ್ಯವು ಬಾಚಿಕೊಳ್ಳಿ, ಆಹಾರವನ್ನು ಚನ್ನಾಗಿ ಅಗಿದು ಊಟಮಾಡಿ, ಹೇರಳವಾಗಿ ನೀರು ಕುಡಿಯಿರಿ, ಬಟ್ಟೆಗಳನ್ನು ಸ್ವಚ್ಚವಾಗಿ ವಾಶ್ ಮಾಡಿಕೊಳ್ಳಿ ಬೀಡಿ, ಸಿಗರೇಟು ತಂಬಾಕು ಸೇವನೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ನಿಲಯ ಪಾಲಕ ಡಿ.ಎನ್. ಪುಟ್ಟರಾಜು ಮಾತನಾಡಿ, ಸರ್ಕಾರ ಉಚಿತ ಲೇಖನ ಸಾಮಗ್ರಿ, ಉಚಿತ ಬಾತ್ ಕಿಟ್, ತುರ್ತು ಆರೋಗ್ಯ ನಿರ್ವಹಣೆಗೆ ಪ್ರಥಮ ಚಿಕಿತ್ಸಾ ಕಿಟ್ ಸಾಮಗ್ರಿಗಳನ್ನು ನೀಡಿದ್ದು, ಇವುಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಅಡುಗೆ ಸಹಾಯಕರಿಗೆ ವೈಯಕ್ತಿಕ ಸ್ವಚ್ಚತೆ ಮತ್ತು ದಾಸ್ತಾನು ನಿರ್ವಹಣೆ ಮತ್ತು ಅಡುಗೆ ಪಾದಾರ್ಥಗಳ ಬಳಕೆ ಕ್ರಮ, ಶುದ್ಧ ಕುಡಿಯುವ ನೀರಿನ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಯಿತು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸಾ ಔಷದೋಪಚಾರ ನೀಡಿದರು. ಕಾರ್ಯಕ್ರಮದಲ್ಲಿ ಒಟ್ಟು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಂಗನಾಥಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಾಧಿಕಾರಿ ವಿಲಾಸ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಾನಾಯ್ಕ್, ಆರೋಗ್ಯ ಸುರಕ್ಷತಾಧಿಕಾರಿ ತಿಪ್ಪಮ್ಮ ಇದ್ದರು.

