ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಜನರ ಬಹುದಿನಗಳ ಬೇಡಿಕೆಯಾದ ಯು.ಜಿ.ಡಿ.ಗೆ ಸಂಬಂಧಿಸಿದಂತೆ ಈಗಾಗಲೇ 250 ಕೋಟಿ ರೂಗಳು ಮಂಜೂರಾಗಿದ್ದು, ಅದರಲ್ಲಿ ಈಗ ಮೊದಲ ಹಂತದ ಕಾಮಗಾರಿಗಾಗಿ 100 ಕೋಟಿ ಬಿಡುಗಡೆಯಾಗಿದ್ದು, ಡಿ.ಪಿ.ಆರ್ ಆಗಿದ್ದು ಟೆಂಡರ್ ನೋಟಿಫಿಕೇಶನ್ ಗೆ ಹೋಗಿದೆ ತುರ್ತಾಗಿ ಕಾರ್ಯ ಆರಂಭಿಸಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಹೇಳಿದರು.
ನಗರದ ನಗರಸಭೆ ಕಾರ್ಯಾಲಯದ ಕೌನ್ಸಿಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರಸಭೆಯ 2025- 26ನೇ ಸಾಲಿನ ಕರಡು ಆಯವ್ಯಯ ಅಂದಾಜು ಪಟ್ಟಿ ತಯಾರಿಸುವ ಸಂಬಂಧ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾಜಿ ನಗರಸಭೆ ಸದಸ್ಯ ಯು.ಜಿ.ಡಿ ಒಂದು ಕಾಲದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈಗಲೇ ಯು.ಜಿ.ಡಿ. ಬಂದೇ ಬಿಡ್ತು ಎಂಬಂತಾಗಿದ್ದು, ಇತ್ತೀಚೆಗೆ ಅದರ ಸದ್ದೆ ಅಡಗಿ ಹೋಗಿದೆ ಎಂಬತಾಗಿದೆ ಎಂದು ಕೇಳಿದ ಪ್ರಶ್ನೆಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಜಯ್ ಕುಮಾರ್ ಅವರು ಮೇಲಿನಂತೆ ಉತ್ತರ ನೀಡಿದರು.
ಮಾಜಿ ನಗರಸಭಾ ಸದಸ್ಯ ನಾರಾಯಣಾಚಾರ್ ಮಾತನಾಡಿ, ನಗರದ ಬಡಾವಣೆಗಳಲ್ಲಿ ಪಾರ್ಕ್ ಗಳು ಹಾಳು ಬಿದ್ದಿದ್ದು, ಪಾರ್ಕ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಪಾರ್ಕಿಗೆ ಬರುವ ಅಮಾಯಕರನ್ನು ವಿದ್ಯಾರ್ಥಿಗಳನ್ನು ಟಾರ್ಗೇಟ್ ಮಾಡಿ ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುವ ದಂಧೆ ನಡೆಯುತ್ತಿದ್ದು, ಈ ಬಗ್ಗೆ ನಗರಸಭೆ ಪೊಲೀಸ್ ಬೀಟ್ ವ್ಯವಸ್ಥೆ ಮಾಡಿ ನಗರದ ಪಾರ್ಕ್ ಗಳನ್ನು ಅಭಿವೃದ್ಧಿ ಮಾಡಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಈ ಕುರಿತು ಮಾತನಾಡಿ ಅಮೃತ್ ಯೋಜನೆಯಡಿಯಲ್ಲಿ 2.50ಕೋಟಿ ಅನುದಾನ ಬಂದಿದ್ದು, ಪಾರ್ಕ್ ಗಳ ಅಭಿವೃದ್ಧಿಗಾಗಿ ಬಳಸಬಹುದಾಗಿದ್ದು ಪ್ರಸ್ತಾವನೆ ಕಳುಹಿಸಿದ್ದೇವೆ. ಅನುಮೊದನೆಯಾಗಿ ಬಂದ ತಕ್ಷಣ ನಗರದ ಬಡಾವಣೆಗಳ ಎಲ್ಲಾ ಪಾರ್ಕ್ ಗಳಿಗೆ ಕಾರ್ಯಕಲ್ಪ ಒದಗಿಸಲಿದ್ದು, ನಗರಸಭೆಯಿಂದಲೇ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.
ನಗರದ ಮುಖ್ಯ ರಸ್ತೆ ಸೇರಿದಂತೆ ಲಕ್ಕವ್ವನಹಳ್ಳಿ ರಸ್ತೆ, ಟಿ.ಟಿ.ರಸ್ತೆ, ಹುಳಿಯಾರು ರಸ್ತೆ ಎಲ್ಲಾ ಕಡೆ ಫೂಟ್ ಪಾತ್ ಗಳು ಒತ್ತುವರಿಯಾಗಿದ್ದು ಜೊತೆಗೆ ತರಕಾರಿ ಅಂಗಡಿಗಳು, ಫುಟ್ ಪಾತ್ ವ್ಯಾಪಾರಿಗಳು ಫುಟ್ ಪಾತ್ ನ್ನು ಆಕ್ರಮಿಸಿದ್ದು, ಈ ವ್ಯಾಪಾರಕ್ಕಾಗಿ ಬರುವ ಜನರು ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಾಹನಗಳ ನಿಲುಗಡೆ ಮಾಡಲಾಗುತ್ತಿದ್ದು, ಫುಟ್ ಪಾತ್ ಇಲ್ಲದೆ ಪಾದಾಚಾರಿಗಳಿಗೆ ಓಡಾಡಲು ತೊಂದರೆಯಾಗಿದೆ ಎಂದು ಜಿ ದಾದಾಪೀರ್, ನಾರಾಯಣಚಾರ್ ಆಪಾದಿಸಿದರು.
ನಗರದಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು, ಕಚೇರಿಗಳಿಗೆ ಜನರು ಹೋಗುವ ಬೆಳಗಿನ ಜನದಟ್ಟಣೆ ಸಮಯದಲ್ಲಿ ಭಾರಿ ವಾಹನಗಳು, ಸರಕು ಸಾಗಾಣಿಕೆ ವಾಹನಗಳು, ಲಾರಿಗಳು ಓಡಾಡುತ್ತಿದ್ದು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದ್ದು, ಅಪಘಾತಗಳು ಪದೇ ಪದೇ ನಡೆಯುತ್ತಿದ್ದು, ಈ ವ್ಯವಸ್ಥೆಗೆ ಕಡಿವಾಣ ಹಾಕಿ ನಿಗದಿತ ಸಮಯದಲ್ಲಿ ಮಾತ್ರ ಲಾರಿಗಳು ಸರಕು-ಸಾಗಾಣಿಕೆ ವಾಹನಗಳು ನಗರ ಪ್ರವೇಶಿಸುವಂತೆ ಮಾಡಬೇಕು ಎಂದು ಹೇಳಿದರು.
ನಗರದ ಮಧ್ಯದ ಪ್ರಧಾನ ರಸ್ತೆಯಿಂದ ಬೆಂಗಳೂರು ಕಡೆಗೆ ಹುಳಿಯಾರು ಕಡೆಗೆ ಅಥವಾ ಬಳ್ಳಾರಿ ಕಡೆಗೆ ಹೋಗುವ ವಾಹನಗಳು ದಾರಿ ತಿಳಿಯದೆ ಪರದಾಡುವಂತಾಗುತ್ತಿದ್ದು, ನಗರದ ಮುಖ್ಯರಸ್ತೆಯ ಜೆಂಕ್ಷನ್ ಜಾಗದಲ್ಲಿ ಅಂದರೆ, ಗಾಂಧಿ ಸರ್ಕಲ್, ಆಸ್ಪತ್ರೆ ಸರ್ಕಲ್, ರಂಜಿತ್ ಹೋಟೆಲ್ ಸರ್ಕಲ್ ಗಳಲ್ಲಿ ನಗರಸಭೆ ವತಿಯಿಂದ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ಕಾರ್ಯಕ್ಕೆ ನಗರದ ರೋಟರಿ ಹಾಗೂ ರೆಡ್ ಕ್ರಾಸ್ ಸೇವಾ ಸಂಸ್ಥೆಗಳಿಂದ ಅಗತ್ಯ ಸಹಕಾರ ನೀಡಲು ಸಿದ್ಧ ಎಂದು ಅವರು ಹೇಳಿದರು.
ಈ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಈ ಎಲ್ಲಾ ಸಮಸ್ಯೆಗಳಿಗೆ ನಗರಸಭೆ ಪ್ರಧಾನ ರಸ್ತೆ ಹಾಗೂ ಹುಳಿಯಾರು ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳನ್ನು ಅಗಲೀಕರಣ ಮಾಡುವುದೊಂದೇ ಪರಿಹಾರ. ಈ ಕಾರ್ಯಕ್ಕೆ ಈಗಾಗಲೇ ಕೈ ಹಾಕಿದ್ದು, ಕೆಲವು ಕಟ್ಟಡ ಮಾಲಿಕರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಕಾನೂನು ಪ್ರಕಾರ ರಸ್ತೆ ಅಗಲೀಕರಣ ಮಾಡಿ ಎಂಬುದಾಗಿ ಸೂಚನೆ ನೀಡಿದ್ದು, ಶೀಘ್ರದಲ್ಲೇ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.
ಜೋಸೆಫ್ ಬಡಾವಣೆ ನಿವಾಸಿ ರೇಖಾ ಮತ್ತು ಸಂಗಡಿಗರು ಮಾತನಾಡಿ ನಮ್ಮದು ಹೆಸರಿಗೆ ಜೋಸೆಫ್ ಬಡಾವಣೆ, ಆದರೆ ಅದು ಗ್ಯಾರೇಜುಗಳ ಬಡಾವಣೆಯಾಗಿದೆ. ಈ ಬಡಾವಣೆಯಲ್ಲಿ ಚರಂಡಿ, ನೀರು, ಬೀದಿದೀಪ, ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿ ಮನುಷ್ಯರು ವಾಸ ಮಾಡುವುದೇ ದುಸ್ತರವಾಗಿದೆ ಎಂದರಲ್ಲದೆ, ಬಡಾವಣೆಯಲ್ಲಿ ಕಸದ ರಾಶಿ ಎಲ್ಲೆಂದರಲ್ಲೇ ಬಿದ್ದಿದ್ದು, ಸ್ವಚ್ಛಗೊಳಿಸುವವರೇ ಗತಿಯಿಲ್ಲದಂತಾಗಿ ನಮ್ಮ ಬಡಾವಣೆ ರೋಗ ರುಜಿನಗಳ ತಾಣವಾಗಿದೆ. ಈ ಸಾಲಿನ ಬಜೆಟ್ ನಲ್ಲಾದರೂ ನಮಗೆ ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಿಕೊಡಿ ಎಂದು ಮನವಿ ಮಾಡಿದರು.
ಇವರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ಎ.ವಾಸೀಂ ಹಾಗೂ ಆ ವಾರ್ಡ್ ಸದಸ್ಯ ಬಿ.ಎನ್. ಪ್ರಕಾಶ್ ರವರು ಆ ಬಡಾವಣೆಯಲ್ಲಿ ಕೆಲವು ನ್ಯೂನತೆಗಳಿದ್ದು, ಸದ್ಯಕ್ಕೆ ಅಲ್ಲಿ ಯು.ಜಿ.ಡಿ ಬರುವುದಿಲ್ಲ. ಮನೆಗಳವರು ನೀವೇ ಸೆಫ್ಟಿಕ್ ಟ್ಯಾಂಕ್ ನಿರ್ಮಿಸಿಕೊಳ್ಳಬೇಕಾಗಿದೆ. ಉಳಿದಂತೆ ಬಡಾವಣೆ ಸ್ವಚ್ಚತೆ ಬಗ್ಗೆ ಹೇಳಬೇಕೆಂದರೆ, ನಮ್ಮಲ್ಲಿ ಪೌರಕಾರ್ಮಿಕರ ಕೊರತೆಯಿದ್ದು, ನಿವೃತ್ತಿ ಹೊಂದಿದ ಪೌರಕಾರ್ಮಿಕರ ಹಾಗೂ ಮರಣ ಹೊಂದಿದ ಪೌರಕಾರ್ಮಿಕರ ಜಾಗಕ್ಕೆ ಸರ್ಕಾರ, ಪೌರಾಡಳಿತ ಸಚಿವಾಲಯ ಹೊಸದಾಗಿ ನೇಮಕಾತಿ ಮಾಡಿಲ್ಲದೇ ಇರುವುದರಿಂದ ನಮಗೆ ಪೌರಕಾರ್ಮಿಕರ ಕೊರತೆಯಿದ್ದು, ಇರುವ ಪೌರಕಾರ್ಮಿಕರನ್ನೇ ಅಡ್ಜೆಸ್ಟ್ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನೂತನ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಅಧ್ಯಕ್ಷರು ಮಾತನಾಡಿ ನಗರಸಭೆ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಗಮನಕ್ಕೆ ತಂದಿದ್ದು, ಸಚಿವರ ಸೂಚನೆಯಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಅಗತ್ಯ 72 ಪೌರನೌಕರರನ್ನು ನೇಮಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳ ಒಪ್ಪಿಗೆ ಬಂದ ತಕ್ಷಣ ಹೊಸ ಸಿಬ್ಬಂದಿ ನೇಮಕ ಮಾಡಿಕೊಂಡು ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರಲ್ಲದೆ, ನಮ್ಮ ನಗರಸಭೆ ಕೌನ್ಸಿಲ್ ನಗರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದು, ಆದರೆ ನಗರದ ಜನರು ಕಂದಾಯವನ್ನೇ ಕಟ್ಟದಿದ್ದರೆ ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಗರದಲ್ಲಿ ಅನೇಕ ದೊಡ್ಡ ದೊಡ್ಡ ಹೋಟೆಲ್ ಗಳು, ಲಾಡ್ಜ್ ಗಳು, ಉದ್ದಿಮೆಗಳು, ಬ್ಯಾಂಕ್ ಗಳು, ಖಾಸಗಿ ಆಸ್ಪತ್ರೆಗಳು, ಶಾಲಾ- ಕಾಲೇಜುಗಳು, ಲಕ್ಷಾಂತರ ರೂಗಳ ಕಂದಾಯ ಬಾಕಿ ಉಳಿಸಿಕೊಂಡಿದ್ದು, ಈ ಎಲ್ಲಾ ಕಟ್ಟಡಗಳನ್ನು ರಿಸರ್ವೆ ಮಾಡಲು ಹೇಳಿದ್ದೇವೆ. ಅವರೆಲ್ಲಾ ಕಟ್ಟಿದರೆ, ಸುಮಾರು 10 ಕೋಟಿ ಹಣ ನಗರಸಭೆಗೆ ಬರಲಿದೆ ಎಂದು ಸಭೆಗೆ ತಿಳಿಸಿದರು.
ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ಬದುಕು ಅತಂತ್ರ ಸ್ಥಿತಿ ತಲುಪಿದ್ದು, ಅವರುಗಳಿಗೆ ಸೂಕ್ತ ಸ್ಥಳ ನಿಗದಿ ಮಾಡಿಕೊಡಬೇಕೆಂದು ಬೀದಿ ಬದಿ ವ್ಯಾಪಾರಸ್ಥರ ಮುಖಂಡರೊಬ್ಬರ ಮನವಿಗೆ ಸ್ಪಂದಿಸಿದ ನಗರಸಭೆ ಪೌರಾಯುಕ್ತ ಎ.ವಾಸೀಂ ರವರು ಬೀದಿಬದಿ ವ್ಯಾಪಾರಿಗಳಿಗೆ ಒಂದು ಕಡೆ ವ್ಯಾಪಾರಕ್ಕಾಗಿ ಸ್ಥಳ ನಿಗದಿ ಮಾಡಿಕೊಡುವುದಾಗಿ, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ನಗರದ ಬೈಪಾಸ್ ನಲ್ಲಿ ನಗರಕ್ಕೆ ಬರುವ ರಸ್ತೆ ಯುದ್ದಕ್ಕೂ ಲಾರಿಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಉಂಟಾಗುತ್ತಿದೆ. ನಗರದ ಟ್ರಾಫಿಕ್ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಹಾಗೂ ಟ್ರಾಫಿಕ್ ಪೊಲೀಸರ ಜೊತೆ ಸಭೆ ನಡೆಸಿ ಟ್ರಾಫಿಕ್ ಸಿಗ್ನಲ್ ಗಳ ಅಳವಡಿಕೆ ಸೇರಿದಂತೆ ನಗರದಲ್ಲಿ ಸಿ.ಸಿ.ಟಿ.ವಿಗಳ ಕಣ್ಗಾವಲು ಅಳವಡಿಕೆ ಮಾಡಲಾಗುತ್ತದೆ ಎಂದು ಸಭೆಗೆ ಭರವಸೆ ನೀಡಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಎ. ವಾಸೀಂ, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ನಗರಸಭೆ ವ್ಯವಸ್ಥಾಪಕಿ ಬಿ.ಆರ್.ಮಂಜುಳಾ, ನಗರಸಭೆ ಸದಸ್ಯ ಬಿ.ಎನ್. ಪ್ರಕಾಶ್, ಲೆಕ್ಕಅಧೀಕ್ಷಕ ಗೋವಿಂದರಾಜು, ಜನಾರ್ಧನ್ ಕರಡಿ, ಆರೋಗ್ಯ ನಿರೀಕ್ಷಕರಾದ ಮೀನಾಕ್ಷಿ, ಅಶೋಕ್, ಮಹಾಲಿಂಗಪ್ಪ, ಎಇಇ ರಾಜು, ಹರ್ಷವರ್ಧನ, ಪ್ರಸನ್ನ, ಶ್ರೀರಂಗಪ್ಪ ಸೇರಿದಂತೆ ನಗರಸಭೆ ಸಿಬ್ಬಂದಿವರ್ಗ ಹಾಗೂ ನಗರದ ನಾಗರೀಕರು, ಸಾರ್ವಜನಿಕರು ಉಪಸ್ಥಿತರಿದ್ದರು.
“ನಗರದ ಅಭಿವೃದ್ಧಿಗೆ ನನ್ನ ಅಧಿಕಾರ ಅವಧಿಯಲ್ಲಿ ಕೈಲಾದಷ್ಟು ಅಭಿವೃದ್ಧಿ ಮಾಡುತ್ತೇನೆ ಪಾರ್ಕ್ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ರಸ್ತೆ ಅಗಲೀಕರಣ ವಿದ್ಯುತ್ ದೀಪ ಚರಂಡಿ ನಗರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತೇನೆ. ಸಚಿವರು ಆಶೀರ್ವಾದದೊಂದಿಗೆ ನಗರ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ”.
ಜೆ ಅಜಯ್ ಕುಮಾರ್, ನಗರಸಭೆ ಅಧ್ಯಕ್ಷರು, ಹಿರಿಯೂರು.