ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಆರೋಪಿ ಬಿಹಾರ ಮೂಲದ ರಿತೇಶ್ ಕುಮಾರ್ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಹುಬ್ಬಳ್ಳಿ ಪೊಲೀಸರ ಗುಂಡಿಗೆ ಬಲಿಯಾಗಿದ್ದನು.
ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಮುಂದಿನ ಎರಡು ದಿನಗಳಲ್ಲಿ ಸಿಐಡಿ ತನಿಖೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣದ ತನಿಖೆಗಾಗಿ ತಜ್ಞರ ತಂಡ ರಚಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಪಿಐಎಲ್ ಸಲ್ಲಿಸಿದೆ. ಎನ್ಕೌಂಟರ್ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆ ವಿವರ (ಸಿಡಿಆರ್) ಪರಿಶೀಲಿಸಬೇಕು. ವೈರ್ಲೆಸ್ ಲಾಗ್ ಬುಕ್ ಪರಿಶೀಲನೆಗೆ ನಿರ್ದೇಶಿಸಲು ಮನವಿ ಮಾಡಿದೆ.
ಮೃತನ ದೇಹದ ಅಂತ್ಯಕ್ರಿಯೆ ಮಾಡದಂತೆ ತಡೆಗೆ ಮತ್ತು ಸಾಕ್ಷ್ಯನಾಶ ಆಗದಂತೆ ಕ್ರಮಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸುಪ್ರೀಂಕೋರ್ಟ್ ಮಾರ್ಗಸೂಚಿ ಪಾಲಿಸಲು ಸೂಚನೆ ನೀಡಿದೆ. ಮರಣೋತ್ತರ ಪರೀಕ್ಷೆಯ ವಿಡಿಯೋಗ್ರಾಫ್ ಮಾಡಿ ಮರಣೋತ್ತರ ಪರೀಕ್ಷೆ ವೇಳೆ ಸಂಗ್ರಹಿಸಿದ ಭಾಗ ರಕ್ಷಿಸಿಡುವಂತೆ ಆದೇಶಿಸಿದೆ.
ಏಪ್ರಿಲ್ 13 ರಂದು ಹುಬ್ಬಳ್ಳಿಯ ವಿಜಯನಗರ ಬಡಾವಣೆಯ ಮನೆಯ ಕಂಪೌಂಡ್ನಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ರಿತೇಶ್ ಕುಮಾರ್ ಪುಸಲಾಯಿಸಿ ಕರೆದುಕೊಂಡು ಹೋಗಿದ್ದನು. ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದನು.
ಬಾಲಕಿಯ ರೇಪ್ ಆ್ಯಂಡ್ ಮರ್ಡರ್ ವಿಚಾರ ಇಡೀ ಹುಬ್ಬಳ್ಳಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಹೀಗಾಗಿ, ಅಶೋಕ ನಗರ ಠಾಣೆ ಮುಂದೆ ಸೇರಿದಂತೆ ಹಲವಡೆ ದೊಡ್ಡ ಮಟ್ಟದ ಹೋರಾಟಗಳು ನಡೆದಿದ್ದವು. ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ಸಾರ್ವಜನಿಕರು ಟೈರ್ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ, ಘಟನೆ ನಡೆದ ಒಂಬತ್ತು ಗಂಟೆಗಳಲ್ಲಿ ಆರೋಪಿ ಬಾರದ ಲೋಕಕ್ಕೆ ಹೋಗಿದ್ದನು. ಪೊಲೀಸರು ಆರೋಪಿಯನ್ನು ಬಂಧಿಸಿ, ಸ್ಥಳ ಮಹಜರಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾಗಿದನು.
ಈ ವೇಳೆ ಆರೋಪಿ ರಿತೇಶ್ ಕುಮಾರ್ ಮೇಲೆ ಅಶೋಕ ನಗರ ಠಾಣೆಯ ಪಿಎಸ್ಐ ಅನ್ನಪೂರ್ಣ ಗುಂಡು ಹಾರಿಸಿದ್ದರು. ಆರೋಪಿ ರಿತೇಶ್ ಕುಮಾರ್ನನ್ನು ಕಿಮ್ಸ್ಗೆ ಸಾಗಿಸುವ ಮುನ್ನವೇ ಹಂತಕನ ಉಸಿರು ನಿಂತಿತ್ತು. ಹೀಗಾಗಿ ಪೊಲೀಸರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಪೈರಿಂಗ್ ನೆಡದ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.