ವರದಿ-ಸಿ.ಅರುಣ್ ಕುಮಾರ್
ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಲೋಕೋಪಯೋಗಿ ಇಲಾಖೆ ಇಲ್ಲಿ ನಿಜಕ್ಕೂ ಜನರಿಗೆ ಉಪಯೋಗಿ ಕೆಲಸ ಮಾಡುತ್ತಿದಿಯೇ, ಎನ್ನುವುದು ಇಲ್ಲಿನ ರಸ್ತೆಯಲ್ಲಿನ ಗುಂಡಿಯನ್ನು ನೋಡಿದರೆ ತಿಳಿಯುತ್ತದೆ. ಸವಾರರ ಸಂಕಷ್ಟವನ್ನೂ ಅರ್ಥಮಾಡಿಕೊಳ್ಳದ ಇಲಾಖೆಯು ಕಣ್ಣಿದ್ದೂ ಕುರಡಾಗಿರುವಂತೆ ವರ್ತಿಸುತ್ತಿದೆ.
ಹುಲಿಕೆರೆ ಮುಖ್ಯರಸ್ತೆ: ಹೊಸಹಳ್ಳಿಯ ಹೇಮಾವತಿ ಸಿದ್ಧೇಶ್ವರ ಬಡಾವಣೆ ಹತ್ತಿರ ಹುಲಿಕೆರೆಗೆ ತೆರಳುವ ಮುಖ್ಯರಸ್ತೆಯಲ್ಲಿ ಆಳವಾದ ಗುಂಡಿಬಿದ್ದು ಸವಾರರು ಹರಸಾಹಸಪಟ್ಟು ಸಾಗುವ ದೃಶ್ಯ ನಿತ್ಯವೂ ಕಂಡುಬರುತ್ತದೆ. ಈ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದೂ, ಮಾರುದ್ದ ಗುಂಡಿಯಲ್ಲಿ ನೀರು ನಿಲ್ಲುತ್ತವೆ. ಮಳೆ ಬಂದರೆ, ಇದು ಗೊತ್ತಾಗುವುದಿಲ್ಲ, ಏಕಾಏಕಿ ಗುಂಡಿಯಲ್ಲಿ ದ್ವಿಚಕ್ರವಾಹನಗಳೂ ಸೇರಿದಂತೆ ಇತರೆ ವಾಹನಗಳ ಚಾಲಕರು ಚಕ್ರ ಸಿಕ್ಕಿಹಾಕಿಕೊಂಡು ಅಪಘಾತಗಳು ಸಂಭವಿಸಿವೆ.
ಚಿಕ್ಕಮಕ್ಕಳನ್ನು ಕೂಡಿಸಿಕೊಂಡು ಬೈಕ್‌ಗಳಲ್ಲಿ ಸಾಗುವ ಸವಾರರು ಉಸಿರು ಬಿಗಿ ಹಿಡಿದುಕೊಂಡು ವಾಹನ ಚಾಲನೆಮಾಡಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಅಡಚಣೆಯಾದರೂ, ಅಪಘಾತ ತಪ್ಪಿದ್ದಲ್ಲ ಎನ್ನುವ ಸ್ಥಿತಿ ಇದೆ. ಇಲ್ಲಿನ ರಸ್ತೆಯ ಪಕ್ಕದಲ್ಲಿಯೇ ಸರ್ಕಾರಿ ಲಿಕ್ಕರ್ ಷಾಪ್ ಇದೆ, ಇನ್ನೂ ಯಾವ ಪ್ರಮಾಣದಲ್ಲಿ ಇಲ್ಲಿ ಜನ ಓಡಾಡಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು. ಹಾಗಾಗಿ, ಗುಂಡಿಯನ್ನು ಮುಚ್ಚುವ ತಾತ್ಕಲಿಕ ವ್ಯವಸ್ಥೆಯನ್ನಾದರೂ, ಮಾಡದೇ ದಿವ್ಯ ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿಗಳು ಹೀಗೇಕೆ ವರ್ತಿಸುತ್ತಿದ್ದಾರೋ, ಕಾಣೆವು ಎನ್ನುತ್ತಾರೆ ಇಲ್ಲಿನ ಸವಾರರು.
ಹದಗೆಟ್ಟು ಹಳ್ಳಹಿಡಿದ ರಸ್ತೆ:
ಪ್ರಾರಂಭದಲ್ಲೇ ಗುಂಡಿ ದರ್ಶನಮಾಡಿಸುವ ರಸ್ತೆ, ಸುಮಾರು 15 ರಿಂದ 20ಮೀ. ದೂರದವರೆಗೂ ಡಾಂಬರ್ ಕಿತ್ತೋಗಿದೆ. ರಸ್ತೆ ಸಮತಟ್ಟಾಗಿಲ್ಲ, ದೊಡ್ಡ ಕುಣಿ ತಗ್ಗುಗಳಾಗಿವೆ. ಮಳೆ ವಿರಾಮ ನೀಡಿದ್ದರಿಂದ ಹೇಗೋ ಮ್ಯಾಜಿಕ್ ಮಾಡಿಕೊಂಡು ವಾಹನಗಳು ಮುನ್ನುಗುತ್ತಿವೆ.
ಇಲ್ಲಿ ಹುಲಿಕೆರೆ, ಕಾನಮಡುಗು ಮುಂತಾದ ಗ್ರಾಮಗಳಿಗೆ ತೆರಳುವ ಸಾರ್ವಜನಿಕರು ನಿತ್ಯ ನೂರಾರು ಸವಾರರು ರಸ್ತೆಯನ್ನು ಬಳಸುತ್ತಿರುವುದರಿಂದ ಅವರಿಗೆ ಅನುಕೂಲವಾಗಲು ಇಲಾಖೆ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. ಅನುದಾನ ಮಂಜೂರು ಆಗುವವರೆಗಾದರೂ, ತಾತ್ಕಲಿಕ ವ್ಯವಸ್ಥೆ ಕಲ್ಪಿಸಲು ತ್ವರಿತಗತಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸುಗಮ ಸಂಚಾರಕ್ಕೆ ಅನು ಮಾಡಿಕೊಡಬೇಕಾಗಿದೆ.
“ಚರಂಡಿ ನೀರು ರಸ್ತೆಗೆ ಬಂದು ಇದರಿಂದ ರಸ್ತೆಗಳು ಹಾಳಾಗಿ ಹೋಗುತ್ತವೆ. ಗ್ರಾಪಂ ನಿರ್ಲಕ್ಷ್ಯ ದಿಂದ ಇಲ್ಲಿ ರಸ್ತೆಗೆ ಚರಂಡಿ ನೀರು ಹರಿಯುತ್ತವೆ. ಸಹಜವಾಗಿಯೇ ಡಾಂಬರ್ ಕಿತ್ತು ಹೋಗುತ್ತದೆ. ಸಂಬoಧಪಟ್ಟ ಇಲಾಖೆಯು ಈ ಕೂಡಲೇ ಗ್ರಾಪಂ ಅಧಿಕಾರಿಗಳಿಗೆ ಚರಂಡಿ ನೀರು ರಸ್ತೆಗೆ ಹರಿಯದಂತೆ ನಿರ್ವಹಿಸಲು ತಿಳಿಸಬೇಕು. ಸಾಕಷ್ಟು ಸಂಖ್ಯಯಲ್ಲಿ ಸವಾರರು ನಿತ್ಯ ಸಂಚರಿಸುವುದರಿoದ ಅವರ ಜೀವಕ್ಕೆ ಸಂಚಕಾರವಾಗದoತೆ ನೋಡಿಕೊಳ್ಳಬೇಕು”.
ಎಳೆನೀರು ಗಂಗಣ್ಣ, ಹೊಸಹಳ್ಳಿ, ದ.ಸಂ.ಸ. ತಾಲೂಕು ಅಧ್ಯಕ್ಷ, ಕೂಡ್ಲಿಗಿ.
“ಈ ರಸ್ತೆ ಕೆಲವು ತಿಂಗಳ ಹಿಂದೆ ಚನ್ನಾಗಿತ್ತು. ಇಲ್ಲಿಯ ಕಾಲೋನಿಗಳ ಚರಂಡಿ ನೀರು ರಸ್ತೆಗೆ ಹರಿದು ಬರುತ್ತಿರುವುದರಿಂದ ಸಹಜವಾಗಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ರಸ್ತೆ ನಿರ್ವಹಿಸಲು ಅನುದಾನ ಬಿಡುಗಡೆಯಾದ ತಕ್ಷಣವೇ, ಸರಿಪಡಿಸಲಾಗುವುದು. ಗ್ರಾಪಂ ಅಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗುವುದು”.
ಕೆ.ನಾಗನಗೌಡ, ಎಇಇ, ಲೋಕೋಪಯೋಗಿ ಇಲಾಖೆ, ಕೂಡ್ಲಿಗಿ.

