ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕೋಳಿ ತುಂಬಿದ್ದ ಕ್ಯಾಂಟರ್ ಲಾರಿ ಪಲ್ಟಿಯಾಗಿ ನೂರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಆನಂದಪುರಂ ಬಳಿಯ ಮುಂಬಾಳು ಕೆರೆ ಏರಿ ಮೇಲೆ ನಡೆದಿದೆ.
ಸಾಗರ ತಾಜ್ ಟ್ರೇಡರ್ಸ್ಗೆ ಕಡೂರಿನಿಂದ ಸಾಗರಕ್ಕೆ ನಾಲ್ಕೂವರೆ ಟನ್ನಷ್ಟು ಕೋಳಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಕಾರು ಅಡ್ಡ ಬಂದ ಕಾರಣ ಕ್ಯಾಂಟರ್ ಲಾರಿ ಪಲ್ಟಿಯಾಗಿ 700ಕ್ಕೂ ಹೆಚ್ಚು ಕೋಳಿಗಳು ರಸ್ತೆಯಲ್ಲಿಯೇ ಸಾವನ್ನಪ್ಪಿ ಲಕ್ಷಾಂತರ ರೂ. ನಷ್ಟವಾಗಿದೆ.
ಕೋಳಿಗೆ ಮುಗಿಬಿದ್ದ ಜನ: ಕ್ಯಾಂಟರ್ ಲಾರಿಯಿಂದ ರಸ್ತೆ ಮೇಲೆ ಬಿದ್ದಿದ್ದ ನೂರಾರು ಕೋಳಿಗಳನ್ನು ದಾರಿಯಲ್ಲಿ ಹೋಗುವವರು ನನಗೊಂದು, ನಮ್ಮ ಮನೆಗೊಂದು ಎಂಬಂತೆ ಕೋಳಿಗಳನ್ನು ಹಿಡಿದು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದಲ್ಲದೆ ಒಂದಿಷ್ಟು ಕೋಳಿಗಳು ಅಪಘಾತದಲ್ಲಿ ಸಾವುಕಂಡಿದ್ದವು.
ಕ್ಯಾಂಟರ್ ಚಾಲಕ ಮೂಕ ಪ್ರೇಕ್ಷಕನಾಗಿ ನಿಂತು ನೋಡುತ್ತಿದ್ದ. ಸ್ಥಳಕ್ಕೆ ಆಗಮಿಸಿದ ಆನಂದಪುರಂ ಪೊಲೀಸರು ಸಂಚಾರ ಮುಕ್ತಗೊಳಿಸಿದ್ದಾರೆ.

