ಭದ್ರಾ ಮೇಲ್ದಂಡೆ ಪರಿಷ್ಕೃತ ಪ್ರಸ್ತಾವನೆ ಬೆನ್ನತ್ತಿ ಮಾಡಿಸ್ತೇನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ಸಂಚಾಯಿನಿ ಯೋಜನೆಯಡಿ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಪ್ರಸ್ತಾವನೆಗೆ ಬೆನ್ನತ್ತಿ ಕೇಂದ್ರದ ಅನುಮೋದನೆ ದೊರಕಿಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಂಸದ ಗೋವಿಂದ ಕಾರಜೋಳ ಭರವಸೆ ನೀಡಿದರು.

    ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಶುಕ್ರವಾರ ಮಾತುಕತೆ ನಡೆಸಿದ ಅವರು ಕಳೆದ ಬಾರಿ ಭದ್ರಾ ಮೇಲ್ದಂಡೆ ಯೋಜನೆ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟ ಅನುಮೋದನೆ ವರೆಗೆ ಬಂದು ನಿಂತಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗದೇ ಹೋಯಿತು. ಆ ಬಾರಿ ಹಾಗೆ ಆಗದಂತೆ ನೋಡಿಕೊಳ್ಳಲಾಗುವುದು. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಅನುಮೋದನೆಗೆ ಗಂಭೀರ ಪ್ರಯತ್ನ ಮಾಡಲಾಗುವುದೆಂದರು.

- Advertisement - 

      ಹಿಂದೆ ಸಲ್ಲಿಸಿದ ಪ್ರಸ್ತಾವನೆ ಅನುಸಾರ ಕೇಂದ್ರ ಸರ್ಕಾರ 5300 ಕೋಟಿ ರು ಅನುದಾನ ನೀಡಬೇಕಿತ್ತು. ಈಗ ಪರಿಷ್ಕೃತ ಪ್ರಸ್ತಾವನೆ ಅನುಸಾರ ಈ ಮೊತ್ತ ಏರುಪೇರಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ 21,167 ಕೋಟಿ ರೂಪಾಯಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದೆ. ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಡ್ರಿಪ್ ಹೊರತು ಪಡಿಸಿ ಹತ್ತು ಸಾವಿರ ಕೋಟಿ ರೂಪಾಯಿ ವ್ಯಯ ಮಾಡಿದೆ. ಉಳಿದ ಹನ್ನೊಂದು ಸಾವಿರ ಕೋಟಿ ರುಪಾಯಿಯಲ್ಲಿ ಕೇಂದ್ರವು ಶೇ.60 ರಷ್ಟು ನೆರವು ನೀಡಬೇಕಿದೆ. ಪ್ರಸ್ತಾವನೆ ಅನುಮೋದನೆಯಾಗುವ ಹೊತ್ತಿಗೆ ನಮೂದಾಗುವ ಮೊತ್ತಕ್ಕೆ ಶೇ.60 ರಷ್ಟು ಕೇಂದ್ರ ಭರಿಸಬೇಕಾಗುತ್ತದೆ ಎಂದರು.

    ಭದ್ರಾ ಮೇಲ್ದಂಡೆ ಗೆ ಅನುದಾನ ಬಿಡುಗಡೆ ಸಂಬಂಧ ತಾವು ಗುರುವಾರ ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಯಾಗಿ ಚರ್ಚೆ ನಡೆಸಿದ್ದೇವೆ. ಮೋದಿಯವರು ಅತ್ಯಂತ ಕಾಳಜಿಯಿಂದ ನಮ್ಮ ಮಾತುಗಳ ಆಲಿಸಿದರು. ಯೋಜನೆಗೆ  ಸಂಬಂಧಿಸಿದಂತೆ ಹಿಂದೆ ಆದ ಸನ್ನಿವೇಶಗಳ ಅವರಿಗೆ ನೆನಪು ಮಾಡಿಕೊ್ಟ್ಟಿದ್ದೇನೆ.ಅನುದಾನ ಬಿಡುಗಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಗೋವಿಂದ ಕಾರಜೋಳ ಹೇಳಿದರು.

- Advertisement - 

     ಭದ್ರಾ ಮೇಲ್ದಂಡೆಗೆ ಕೇಂದ್ರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಕಾಮಗಾರಿ ಆರಂಭಿಸಿದ್ದಿಲ್ಲ. ರಾಜ್ಯ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಯೋಜನೆ ಮುಗಿಸಬೇಕಿತ್ತು.  ರಾಜ್ಯಕ್ಕೆ ಹಣಕಾಸು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ತಾವು ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ  ಒತ್ತಡ ಹಾಕಿದ್ದೆವೆಂದು ಕಾರಜೋಳ ಹೇಳಿದರು.

 ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ಸಿಪಿಐ  ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ಬಾಬು,  ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್ ಬಾಬು, ಮಲ್ಲಾಪುರ ತಿಪ್ಪೇಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್, ಬಿಜೆಪಿ ಮುಖಂಡ ಎಂ.ಎ.ಸೇತುರಾಂ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಗಿರೀಶ್, ಮಾಜಿ ಅಧ್ಯಕ್ಷ ಮುರುಳಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಈ ವೇಳೆ ಉಪಸ್ಥಿತರಿದ್ದರು.

Share This Article
error: Content is protected !!
";