ಯತೀಂದ್ರ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ-ಡಿಸಿಎಂ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರ ಹತ್ತಿರ, ಏನು ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದರು.
ಬೆಂಗಳೂರು ರೌಂಡ್ಸ್ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಈಗ ಮಾತನಾಡಲ್ಲ. ಯಾರ ಹತ್ತಿರ, ಏನು ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಸೂಚ್ಯವಾಗಿ ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶಿಸ್ತು ಕ್ರಮಕ್ಕೆ ಕೆಲ ಶಾಸಕರ ಆಗ್ರಹ ವಿಚಾರವಾಗಿ ಮಾತನಾಡಿ, ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ. ಶಿಸ್ತು ನನ್ನ ಪಕ್ಷದ ಆದ್ಯತೆ ಎಂದು ಪರೋಕ್ಷವಾಗಿ ತಿಳಿಸಿದರು.
ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯ ರಾಜಕೀಯ ಬದುಕಿನ ಕೊನೇ ಘಟ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ನಮಗೆ ಮಾರ್ಗದರ್ಶಕರ ಅಗತ್ಯತೆ ಇದೆ. ಸತೀಶ್ ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ. ಈ ರೀತಿ ವೈಚಾರಿಕವಾಗಿ ಪ್ರಗತಿಪರವಾಗಿ ಸಿದ್ದಾಂತ ಇಟ್ಟುಕೊಂಡಿರುವವರಿಗೆ ಮಾರ್ಗದರ್ಶನ, ನೇತೃತ್ವ ವಹಿಸಿಕೊಳ್ಳಲು ಒಬ್ಬ ನಾಯಕಬೇಕು. ಸತೀಶ್ ಜಾರಕಿಹೊಳಿಯವರು ಅಂತಹ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥರಿದ್ದಾರೆ ಎಂದು ಯತೀಂದ್ರ ಅವರು ತಿಳಿಸಿದ್ದರು.
ಯತೀಂದ್ರ ಹೇಳಿಕೆ ಸಂಬಂಧ ಡಿಸಿಎಂ ಡಿಕೆಶಿ ಆಪ್ತ ಶಾಸಕರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಸಿಎಂ ಬದಲಾವಣೆ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಡುತ್ತಾರೆ. ಅಂದರೆ ನಾವು ಮಾಡಿದ್ರೆ ಬಲಾತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ಹೊರ ಹಾಕಿದ್ದರು. ಚನ್ನಗಿರಿ ಶಾಸಕ ಶಿವಗಂಗ ಬಸವರಾಜ್ ಕೂಡ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು,
ಬನ್ನೇರುಘಟ್ಟ, ಜಿಗಣಿ, ಬೊಮ್ಮಸಂದ್ರ, ಚಂದಾಪುರ ಮತ್ತು ದೊಮ್ಮಸಂದ್ರ ಮೂಲಕ ಮರಳಿ ಬೆಂಗಳೂರಿಗೆ ತೆರಳಿದರು.
ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ಆನೇಕಲ್ ಶಾಸಕ ಬಿ ಶಿವಣ್ಣ ಡಿಸಿಎಂ ಜೊತೆ ಇದ್ದು ವ್ಯಾಪ್ತಿಯ ವಿವಿಧ ರಸ್ತೆಗಳ ಪರಿಸ್ಥಿತಿ, ಸಂಚಾರ ದಟ್ಟಣೆ, ಗ್ರೇಟರ್ ಬೆಂಗಳೂರು ಮುಂತಾದ ವಿಚಾರಗಳನ್ನು ಚರ್ಚಿಸಿದರು.
ಈ ಸಂದರ್ಭದಲ್ಲಿ ಎರಡು ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಅಗತ್ಯ ಮಾಹಿತಿ ಒದಗಿಸಿದರು.
ಬಮೂಲ್ ಮಾಜಿ ಅಧ್ಯಕ್ಷ ಆರ್ಕೆ ರಮೇಶ್, ಮುಖಂಡರಾದ ಶ್ರೀಧರ್, ಆನಂದ್ ರೆಡ್ಡಿ, ಮಾಜಿ ರವಿ, ಹಾಪ್ ಕಾಮ್ಸ್ ಬಾಬು, ಗಟ್ಟಹಳ್ಳಿ ಸೀನಪ್ಪ ಇದ್ದರು.
ಇದೇ ವೇಳೆ ಬೆಂಗಳೂರು ರೌಂಡ್ಸ್ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಶಿವಕುಮಾರ್, ಅ.30ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ನಗರಾಭಿವೃದ್ಧಿ ಜವಾಬ್ದಾರಿ ಹೊಂದಿರುವ ಸಚಿವರ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಇಂಧನ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್ ಅವರು ಒಪ್ಪಿದ್ದು, ನಾವು ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡುತ್ತೇವೆ. ಈಗಾಗಲೇ ಹಲವು ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಕೇಳಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಮುಂದೆ ಜಿಬಿಎ ವ್ಯಾಪ್ತಿಗೆ ಸೇರಲು ಅರ್ಹತೆ ಇರುವ ಜಿಬಿಎ ಗಡಿಭಾಗದ, ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದೇನೆ. ಕೆಲವು ನಗರ ಸಭೆಗಳು, ಪಟ್ಟಣ ಪಂಚಾಯಿತಿಗಳು ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಗಡಿಪ್ರದೇಶಗಳು ನನ್ನ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಶುಕ್ರವಾರ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದಿರುವೆ.
ಈ ಪ್ರದೇಶದ ಕೆಲವು ಭಾಗಗಳನ್ನು ಮುಂದಿನ ದಿನಗಳಲ್ಲಿ ಜಿಬಿಎ ಅಡಿಯಲ್ಲಿ ಬರುವ ಬೆಂಗಳೂರು ಪಾಲಿಕೆಗಳ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳಿವೆ . ಬಿ.ಎಸ್. ಪಾಟೀಲ್ ಅವರ ಸಮಿತಿ ಮೂಲಕ ಜಿಬಿಎ ವ್ಯಾಪ್ತಿಗೆ ಸೇರಿಸಬಹುದಾದ ಪ್ರದೇಶಗಳ ಬಗ್ಗೆ ವರದಿ ತಯಾರಾಗುತ್ತಿದೆ. ಈ ವಿಚಾರವಾಗಿ ಶಾಸಕರು, ಸಂಸದರು, ಸಾರ್ವಜನಿಕರು ಸಂಘ ಸಂಸ್ಥೆಗಳ ಜೊತೆ ಚರ್ಚಿಸಲು ಸೂಚಿಸಿದ್ದೇವೆ ಎಂದು ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

