ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀವಾಣಿ-
ಸಿರಿವಂತರ ಹಿತ್ತಲ ಮನೆಯಲ್ಲಿ ಒಂದು ಗಿಡ. ಆ ಗಿಡದ ಮೇಲೊಂದು ಸಣ್ಣ ಗುಬ್ಬಿ. ಅದಕ್ಕೆ ಮಕ್ಕಳಿಲ್ಲ-ಮರಿಯಿಲ್ಲ. ಇನ್ನೂ ತತ್ತಿಯೇ ಇಟ್ಟಿಲ್ಲ. ಗೂಡೂ ಕಟ್ಟಿಲ್ಲ. ಇದೀಗ ಗೂಡು ಕಟ್ಟುವ ಕೆಲಸ ಕೈಗೆತ್ತಿಕೊಂಡಿದೆ. ಅಲ್ಲಿಂದ-ಇಲ್ಲಿಂದ ಕಡ್ಡಿಗಳನ್ನು ಆಯ್ದು ತರುತ್ತದೆ. ಆಯ್ದ ಕಡ್ಡಿಗಳನ್ನು ಗಿಡದಲ್ಲಿಟ್ಟು ಬೇರೆ ಕಡ್ಡಿಗಳನ್ನು ತರಲು ಹೋಗುತ್ತದೆ. ಬರುವುದರಲ್ಲಿ ಗಿಡದಲ್ಲಿದ್ದ ಕಡ್ಡಿಗಳೆಲ್ಲ ಗಾಳಿಗೆ ಹಾರಿಹೋಗುತ್ತವೆ. ಮತ್ತೆ ತರುತ್ತದೆ, ಮತ್ತೆ ಹಾರುತ್ತದೆ. ಹೀಗೆ ಹತ್ತಾರು ಸಲ ನಡೆಯುತ್ತದೆ. ದಣಿವಾಗಿ ಒಂದಿಷ್ಟು ಗಿಡದಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತದೆ. ಅದನ್ನು ದೂರದಿಂದಲೇ ನೋಡುತ್ತಿದ್ದ ಮನೆಯ ಮಾಲಿಕ ಸಿರಿವಂತ ಕನಿಕರಿಸಿ ಕೆಳಗೆ ಬಂದು
ಗುಬ್ಬಿಗೆ ಕೇಳುತ್ತಾನೆ- “ಗೂಡುಕಟ್ಟಲು ನೀನೆಷ್ಟು ಕಷ್ಟ ಪಡುತ್ತಿರುವಿ ಆದರೆ ಗಾಳಿ ನಿನಗೆ ಗೂಡುಕಟ್ಟಲು ಕೊಡುತ್ತಿಲ್ಲ. ನಿನಗೆ ನಿರಾಶೆ ಆಗುವುದಿಲ್ಲವೇ?”
ಗುಬ್ಬಿ- “ನನ್ನ ಗೂಡು ಕೆಡಹುವ ಗಾಳಿಗೇ ಬೇಸರವಿಲ್ಲ. ಗೂಡು ಕಟ್ಟುವ ನನಗೇಕೆ ಬೇಸರ. ನಿರಾಶೆಯ ಪ್ರಶ್ನೆಯೇ ಇಲ್ಲ. ದಣಿವಾಗಿದೆಯೆಂದು ಒಂದು ಕ್ಷಣ ವಿಶ್ರಮಿಸುತ್ತಿರುವೆನಷ್ಟೆ, ಮಾಲಿಕ- “ಅದೇಕೆ, ನಿನಗಾಗಿ ನಾನೊಂದು ಕಟ್ಟಿದ ಮನೆಯನ್ನೇ ಕೊಡುತ್ತೇನೆ. ಬಂದಿರು ನನಗೆಷ್ಟೋ
ಸಮಾಧಾನವಾಗುತ್ತದೆ!” “ನಿನಗೆ ಸಮಾಧಾನ ಆಗುವುದಾದರೆ ಬರುತ್ತೇನೆ” ಎಂದು ಗುಬ್ಬಿಯು ಸಿರಿವಂತನು ಕಟ್ಟಿಸಿದ ಹಾಲುಗಲ್ಲಿನ ಮನೆಯಲ್ಲಿ ಹೋಗಿ ಕುಳಿತಿತು. ಮಡದಿ-ಮಕ್ಕಳಿಗೆ, ಅಳಿಯಂದಿರಿಗೆ, ಹತ್ತಿರದವರಿಗೆ, ಹೊಂದಿದವರಿಗೆ ಮನೆ- ಮಾರು ಕಟ್ಟಿಕೊಡುವವರು ಎಷ್ಟೋ ಜನರಿದ್ದಾರೆ. ಜಗತ್ತಿನಲ್ಲಿಯೇ ಹೊಚ್ಚ ಹೊಸದಾದ ಎನ್ನುವಂತೆ ಇವನೊಬ್ಬ ನಿಸ್ಸಾಯಕ ಗುಬ್ಬಿಗೆ ಮನೆ ಕಟ್ಟಿದ್ದ. ಸ್ವಲ್ಪ ಸಮಯ ಗುಬ್ಬಿ ಅವನ ಮನೆಯಲ್ಲಿದ್ದು, ಮತ್ತೆ ಹಾರಿಹೋಗಿ ಕಡ್ಡಿಗಳನ್ನಾಯ್ದು ಮನೆಯಲ್ಲಿ ತರುತ್ತಿರುವೆಯಲ್ಲ?
ಗುಬ್ಬಿ-“ಈ ಮನೆಯಲ್ಲೊಂದು ನನ್ನ ಮನೆಯನ್ನು ಕಟ್ಟುತ್ತಿರುವೆನು!”ಮಾಲಿಕ- “ಅದೇಕೆ, ನಿನಗೆ ಈ ಮನೆ ಇಷ್ಟವಾಗಲಿಲ್ಲವೇ?”ಗುಬ್ಬಿ-“ಇಷ್ಟವಾಗಿದೆ, ಆದರೆ ನಾವು ಕಟ್ಟಿದ ಮನೆಯಲ್ಲಿ ಇರುವವರೇ ವಿನಾ ಕೊಟ್ಟ ಮನೆಯಲ್ಲಿ ಇರುವವರಲ್ಲ!” ಆತ ಗುಬ್ಬಿಯ ಸ್ವಾಭಿಮಾನ ಮೆಚ್ಚಿಕೊಂಡು ಹೇಗಾದರಾಗಲಿ ಒಟ್ಟಿನಲ್ಲಿ ಗುಬ್ಬಿ ತನ್ನ ಮನೆಯಲ್ಲಿದ್ದರೆ ಸಾಕೆಂದು ಮಾಲಿಕ ಸುಮ್ಮನಾದ.
ಗುಬ್ಬಿ ಪುಟ್ಟ ಗೂಡನ್ನು ಕಟ್ಟಿ ಒಂದೆರಡು ತತ್ತಿಗಳನಿಟ್ಟು ಮರಿ ಮಾಡಿತು. ಮರಿಗಳಿಗೆ ನೋವಾದೀತೆಂದು ಸಿರಿವಂತ ಗೂಡಿನ ಕಡ್ಡಿಯ ಮೇಲೆ ಅರಳೆಯ ಹಾಸಿಗೆ ಹಾಸಿದ. ಹೊರಗಿನಿಂದ ಬಂದ ತಾಯಿ ಗುಬ್ಬಿಯು ಹಿಂದು-ಮುಂದು ನೋಡದೆ ಆ ಮೆತ್ತನ ಹಾಸಿಗೆ ಎಳೆದು ಹೊರಚೆಲ್ಲಿತು. ಮಾಲಿಕ “ಅದೇಕೆ, ನಿನ್ನ ಮರಿಗಳಿಗೆ ಹಾಸಿಗೆ ಬೇಡವೇ?”ಗುಬ್ಬಿ- “ನನ್ನ ಮರಿಗಳು ನಾನು ಕಟ್ಟಿದ ಗೂಡಿನ ಕಡ್ಡಿಯ ಮೇಲೆ ಬೆಳೆಯಬೇಕೆ ವಿನಾ ಅನ್ಯರನ್ನು ಅವಲಂಬಿಸಬಾರದು.” ಗುಬ್ಬಿಯ ಛಲ-ಬಲ ಮೆಚ್ಚಿಕೊಂಡ ಸಿರಿವಂತ ಆನಂದಭರಿತನಾದ.
ನೂರಾರು ಬಾರಿ ಗೂಡು ಹಾಳಾದರೂ ಗುಬ್ಬಿ ಬೇಸರಿಸುವುದಿಲ್ಲ. ನಿರಾಶೆಗೊಳ್ಳುವುದಿಲ್ಲ. ಅದು ಕಾರ್ಯೋತ್ಸಾಹ, ನಾವಾದರೋ ಒಮ್ಮೆ ಎಡವಿ ಬಿದ್ದರೆ ಮುಗಿಲೇ ಹರಿದುಬಿದ್ದಂತೆ ಗೋಳಾಡುತ್ತೇವೆ. ಕೈಚೆಲ್ಲಿ ಕೂಡುತ್ತೇವೆ. ಅದು ಕರ್ಮಯೋಗದ ಲಕ್ಷಣವಲ್ಲ.
ಸಿರಿವಂತನು ಹಾಸಿದ ಹಂಸತೂಲಿಕಾ ತಲ್ಪದ ಹಾಸಿಗೆಯನ್ನು ಗುಬ್ಬಿ ಇಟ್ಟುಕೊಳ್ಳಲಿಲ್ಲ. ನಾವಾಗಿದ್ದರೆ ಸದ್ದುಗದ್ದಲವಿಲ್ಲದೆ ಅನ್ಯರು ಕೊಡುವ ವಸ್ತುವಡುವೆ ಮುಚ್ಚಿಮರೆ
ಮಾಡಿಟ್ಟುಕೊಳ್ಳುತ್ತಿದ್ದೇವೇನೋ! ಪಕ್ಷಿಯ ಪ್ರಾಮಾಣಿಕತೆ, ನಿಸ್ಪೃಹತೆ,ನಿರಾಭಾರಿತ್ವ ಕೂಡ ಕರ್ಮಯೋಗದ ಲಕ್ಷಣವೇ ಆಗಿವೆ. ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಮಾಲಿಕೆಯಿಂದ.

