ಟಾರ್ಗೆಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ-ವಿಜಯೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರೇ ಆಗಲಿ ಟಾರ್ಗೆಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

- Advertisement - 

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಸಂಘಟನೆ ಮಾಡಲು ಬಂದಿದ್ದೇನೆ, ರಾಜ್ಯದಲ್ಲಿ ಬಲಿಷ್ಠವಾಗಿ ಪಕ್ಷ ಸಂಘಟಿಸುವ ಕೆಲಸ ಮಾಡಿಕೊಂಡು ಹೋಗುತ್ತೇನೆ. ಕೆಲಸ ಇಲ್ಲದವರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

- Advertisement - 

ಯತ್ನಾಳ್ ಆ್ಯಂಡ್​ ಟೀಂ ವಿರುದ್ಧ ಶಿಸ್ತು ಕ್ರಮದ ವಿಚಾರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದಾರೆ. ಯಾರು ಕ್ರಮ ಕೈಗೊಳ್ಳಬೇಕೋ ಅವರು ತೆಗೆದುಕೊಳ್ಳುತ್ತಾರೆ. ಫೆಬ್ರವರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಇದೆ. ಅಷ್ಟರಲ್ಲೇ ರಾಜ್ಯದ ಚುನಾವಣಾ ಪ್ರಕ್ರಿಯೆ ಮುಗಿಸಬೇಕು. ಪಕ್ಷದ ಇವತ್ತಿನ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಿಗೆ ನೋವು ಇದೆ. ಆ ನೋವು ಏನು ಅಂತ ಅರ್ಥ ಆಗುತ್ತದೆ. ಇದೆಲ್ಲದಕ್ಕೂ ಶೀಘ್ರದಲ್ಲೇ ಇತಿಶ್ರೀ ಹಾಡುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಾಧ್ಯಕ್ಷರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ದೌರ್ಜನ್ಯ, ಆತ್ಮಹತ್ಯೆ, ಜಾನುವಾರುಗಳ ಕೊಲೆ ಘಟನೆಗಳು ನಡೆಯುತ್ತಿವೆ. ವಿಜಯಪುರದಲ್ಲಿ ಯಾವ ರೀತಿ ಕಾರ್ಮಿಕರಿಗೆ ಥಳಿಸಿದ್ದಾರೆ ಅಂತ ನೋಡುತ್ತಿದ್ದೇವೆ. ರಾಜ್ಯ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ. ಈ ರೀತಿ ನಡೆದುಕೊಂಡವರನ್ನು ಕೂಡಲೇ ಬಂಧನ ಮಾಡಬೇಕು ಎಂದು ಅವರು ಆಗ್ರಹಿಸಿದರು.

- Advertisement - 

ಹೊನ್ನಾವರದಲ್ಲಿ ನಡೆದ ಗೋಹತ್ಯೆ ಪ್ರಕರಣ ಕುರಿತು ಮಾತನಾಡಿದ ಅವರು, ಹೊನ್ನಾವರದಲ್ಲಿ ಗೋವಿನ ರುಂಡ ಕತ್ತರಿಸಿ, ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕೂಯ್ದಿದ್ದಾರೆ.

ಇದು ಪ್ರತಿಯೊಬ್ಬರೂ ತಲೆ ತಗ್ಗಿಸುವ ಘಟನೆ. ಇಷ್ಟೊಂದು ನಡೆದರು ಕಾನೂನು ಸುವ್ಯವಸ್ಥೆ ಸರಿಯಾಗಿದೆ ಅಂತ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಿಂದೂ ವಿರೋಧಿ ಶಕ್ತಿ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇವರೆಲ್ಲರಿಗೆ ಕಾನೂನಿನ‌ಬಗ್ಗೆಯಾಗಲಿ, ಪೊಲೀಸರ ಬಗ್ಗೆಯಾಗಲಿ ಭಯವೇ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟೆದೆ. ಗೃಹ ಸಚಿವರು, ಸಿಎಂ ಎಚ್ಚೆತ್ತುಕೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆಂಬ ಸಚಿವ ಎಂ. ಬಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಮುಡಾದಲ್ಲಿ ನಡೆದಿರುವ ಭಾರೀ ಹಗರಣದ ಘಟನೆ ಬಳಿಕ ಕಾಂಗ್ರೆಸ್​ನಲ್ಲಿ ಸಾಕಷ್ಟು ಮಂದಿ ಸಿಎಂ ಆಗುವುದಕ್ಕೆ ಗುದ್ದಾಟ ಮಾಡುವುದನ್ನು ನೋಡುತ್ತಿದ್ದೇವೆ. ಇದರ ನಡುವೆ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರನ್ನು ಅವರ ಪಕ್ಷಕ್ಕೆ ಸೇರಿಸಿಕೊಂಡು ಏನು ಮಾಡುತ್ತಾರೆ ಎಂದು ವಿಜಯೇಂದ್ರ ಪ್ರಶ್ನಿಸಿದರು.

 

Share This Article
error: Content is protected !!
";