ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಯಸುತ್ತಿದ್ದೇನೆ
———————-
ಉಸಿರಿದ್ದಾಗಲೇ ನೋಡುವಾಸೆ
ಯಾರಾದರೂ ತೋರಿಸಿ
ಕಿತ್ತ ಹೂ ಮುಡಿಸಿ
ದೂಪ ದೀಪದಾರತಿ ಬೇಡ
ಅರಚಿ ಅರಚಿ ಅಬ್ಬರಿಸಿ
ಆ ಜನ್ನತ್ ತೋರಿಸುವುದು ಬೇಡ
ಕಾಣದ ಕುರುಡ ನಾ
ಮೊಂಬುತ್ತಿಯ ಬೆಳಕು ಬೇಡ
ಗಿಡವೋ ಜಡವೋ ಜಲವೋ
ನೆಲ ಮುಗಿಲ ಸಂಚಾರವೋ
ಅನಂತ ಬಯಲೊಳಗೆ
ಹರಡಿರುವೆಯೋ… ಹೇಗೆ
ನಿನ್ನ ವಕೀಲಿಯ
ಅವಧೂತ ಸಿದ್ಧರು
ಸೂಫಿ ಸಂತ ಶರಣರು
ಇದ್ದು ನೆನೆದು
ಬಿದ್ದಾಗ ನೋಡೆನ್ನುವರು
ನಮ್ಮನ್ನಾಳುವ ಕಪಟ ಹಾಳೆಗಳಲಿ
ಮೋಸ ವಂಚನೆ ಕೊಲೆ ರಕ್ತ
ಕ್ರೌರ್ಯ ಯುದ್ಧಗಳು
ಹಾದರ ಮೇಲು ಕೀಳು
ಮಡಿ ಮೈಲಿಗೆಯ ಕೂಪ
ಓದಿಸಿ ಮೌನಿಸಿ ಅರಿವು ಕಸಿದ
ರೀತಿ ರಿವಾಜುಗಳೇ ರುಜುವಾದವು
ನಿನ್ನಳತೆ ತಿಳಿಯದ ಸಂತೆಯೊಳಗೆ
ಅದೃಶ್ಯ ಕ್ರಿಮಿ ಅಟ್ಟಹಾಸ
ಚಿತ್ರ ಚಿತ್ತಾರದ ಮೌಢ್ಯ ಮನೆಗಳು
ಬೀಗ ಜಡಿದು ಧೂಳಿಡಿದವು
ಪೂಜಾರಿ ಪಾದ್ರಿ ಮೌಲ್ವಿ ಮಣ್ಣಾದರು
ವಿಶ್ವ ರಣ ರಣ ಜ್ವಾಲೆಯೊಳಗೆ
ಬೆಂದವುಗಳ ಲೆಕ್ಕವಿಟ್ಟವರಾರು
ತುಣುಕಿದರೆ ಚೆಲ್ಲುತ್ತಲೇ
ಭಾರವೆನಿಸಿದರೆ ಹಗುರಾಗಿಸುವ
ಸಮ ತಕ್ಕಡಿಯ ವ್ಯಾಪಾರಿ
ಬಾವಿಯ ಕಪ್ಪೆ ನಾ
ವಿಸ್ತಾರದ ಬಯಲಿಗೆ ಎಸೆ
ಇದ್ದಾಗಲೇ ನೋಡಿಬಿಡಬೇಕು ನಿನ್ನ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.