ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಎರಡೂವರೆ ವರ್ಷ ಮುಖ್ಯಮಂತ್ರಿ ಅಂತಾ ತೀರ್ಮಾನ ಆಗಿಲ್ಲ. ಇವಾಗ ನಾನು ಮುಖ್ಯಮಂತ್ರಿ ಆಗಿದ್ದೇನೆ, ಮುಂದೆಯೂ ನಾನೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ವಿಧಾಸಭೆಯಲ್ಲಿ ಈ ವಿಷಯ ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು, ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿದೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎರಡೂವರೆ ವರ್ಷ ಎಂದು ಚರ್ಚೆಯಾಗಿಲ್ಲ ಎಂದು ಸಿಎಂ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಕುರಿತ ಚರ್ಚೆಯ ಸಂದರ್ಭದಲ್ಲಿ ಉತ್ತರಿಸುವಾಗ ನಾಯಕತ್ವ ಬದಲಾವಣೆ ವಿಚಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಸುನೀಲ್ ಕುಮಾರ್, ಮುನಿರತ್ನ ಸೇರಿದಂತೆ ಮತ್ತಿತರರು ಸಿದ್ದರಾಮಯ್ಯ ಅವರ ಕಾಲೆಳೆದರು. ಐದು ವರ್ಷ ನೀವೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿ ನೋಡೋಣ ಎಂದು ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು. ಈ ವೇಳೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ಕೂಡ ನಡೆಯಿತು.
ಯಾವುದೇ ಕಾರಣಕ್ಕೂಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ-
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ, ಬಿಜೆಪಿ ಶಾಸಕ ಸಿದ್ದು ಸವದಿ ಇನ್ಮುಂದೆ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರಲಿದೆ ಎಂದರು. ಅದಕ್ಕೆ ನಿಮ್ಮ ಅಪ್ಪರಾಣೆಗೂ ಬರಲ್ಲ. ಕರ್ನಾಟಕದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂಅಧಿಕಾರಕ್ಕೆ ಬರುವುದಿಲ್ಲ ಎಂದು ಸಿಎಂ ತಿರುಗೇಟು ನೀಡಿದರು.
ಆಗ ಮಧ್ಯಪ್ರವೇಶಿಸಿದ ಆರ್.ಅಶೋಕ, ಯಡಿಯೂರಪ್ಪ ಅವರಿಗೆ ಯಾವತ್ತೂ ನೀವು ಸಿಎಂ ಆಗಲ್ಲ ಎಂದು ಹೇಳುತ್ತಿದ್ದಿರಿ, ಆದರೆ, ನಾಲ್ಕು ಬಾರಿ ಸಿಎಂ ಆದರು ಎಂದರು. ಬಳಿಕ ಮಾತು ಮುಂದುವರಿಸಿದ ಸಿಎಂ ಸಿದ್ದರಾಮಯ್ಯ, ಅದಕ್ಕೆ ಯಡಿಯೂರಪ್ಪ ಅವರನ್ನು ಐದು ವರ್ಷ ಅಧಿಕಾರ ಪೂರ್ಣಗೊಳಿಸಲು ನೀವು ಬಿಡಲೇ ಇಲ್ಲ. 2008 ರಿಂದ ಮೂರು ಮಂದಿ ಮುಖ್ಯಮಂತ್ರಿ ಆದಿರಿ ಎಂದರು.
ಮತ್ತೆ ಸಿಎಂ ಮಾತಿನ ವೇಳೆ ಮಧ್ಯಪ್ರವೇಶಿಸಿದ ಆರ್ ಅಶೋಕ್, ಕಳೆದ ಬಾರಿ ಐದು ವರ್ಷ ಸಿಎಂ ಸ್ಥಾನ ಕೊಟ್ಟಿದ್ದರು. ಈ ಬಾರಿ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎರಡೂವರೆ ವರ್ಷ ಅಂತಾ ಬರೆದು ಕೊಟ್ಟಿದ್ದಾರೆ. ಒಮ್ಮೆ ಚೆಕ್ ಮಾಡಿ ನೋಡಿ ಎಂದು ಅಶೋಕ್ ಸಿದ್ದರಾಮಯ್ಯನವರ ಕಾಲೆಳೆದರು. ಪ್ರತಿಪಕ್ಷದ ನಾಯಕರ ಈ ಮಾತಿಗೆ ನೀವು ಇದ್ದಿರಾ ಮಾತುಕತೆ ಸಂದರ್ಭದಲ್ಲಿ ಎಂದು ಸಿಎಂ ತೀಕ್ಷ್ಣವಾಗಿ ಪ್ರಶ್ನಿಸಿದರು.
ಫೋನ್ ಬರುತ್ತಿತ್ತು:
ವಿಪಕ್ಷ ನಾಯಕ ಆರ್.ಅಶೋಕ್ ಮುಂದುವರೆದು ಮಾತನಾಡಿ, ನೀವು ದೆಹಲಿಗೆ ಎರಡು ವಿಮಾನದಲ್ಲಿ ಹೋಗುತ್ತಿದ್ದಂತೆ ನನಗೆ ಫೋನ್ ಬರುತ್ತಿತ್ತು, ಏನೇನು ಆಯ್ತು ಅಂತಾ. ಆದರೆ, ಯಾರು ಫೋನ್ ಮಾಡಿದ್ದರು ಅಂತಾ ನಾನು ಹೇಳುವುದಿಲ್ಲ ಎಂದು ತಿಳಿಸಿದರು.
ಆಗ ಸಿಎಂ ನಾವು ಸರಿಯಾಗಿದ್ದೇವೆ, ಯಾವ ಬರವಣಿಗೆಯೂ ತಪ್ಪಾಗಿಲ್ಲ. ನಮ್ಮದು ಹೈಕಮಾಂಡ್ ಪಾರ್ಟಿ. ನಾನು ಐದು ವರ್ಷ ಪೂರ್ಣಗೊಳಿಸಿದ್ದೇನೆ. ಎರಡನೇ ಬಾರಿಗೆ ಮತ್ತೆ ಮುಖ್ಯಮಂತ್ರಿ ಆಗಿದ್ದೇನೆ. ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿದೆ. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುವವರು ನಾವು ಎಂದರು. ಆಗ ಮತ್ತೆ ಸಿಎಂ ಕಾಲೆಳೆದ ಆರ್.ಅಶೋಕ ಇಲ್ಲೇ ಸಮಸ್ಯೆ ಇರೋದು ಅಂತಾ ಕಿಚಾಯಿಸಿದರು.
ಈ ವೇಳೆ ಶಾಸಕ ಸುನೀಲ್ ಕುಮಾರ್ ಮಧ್ಯಪ್ರವೇಶಿಸಿ, ಮೊದಲು ನಾನೇ ಸಿಎಂ ಅಂತಾ ಹೇಳಿದ್ದಿರಿ. ನಂತರ ಹೈಕಮಾಂಡ್ ನಿರ್ಧಾರ ಮಾಡೋದಲ್ಲ, ಶಾಸಕರು ನಿರ್ಧಾರ ಮಾಡೋದು ಅಂದಿರಿ. ಇವಾಗ ನಾವು ಅನ್ನುತ್ತಿದ್ದಿರಿ. ನಾನೇ ಇಂದ ನಾವಿಗ ಎನ್ನುವ ಹಂತಕ್ಕೆ ಬಂದಿರಿ. ಶಾಸಕರಿಂದ ಹೈಕಮಾಂಡ್ಗೆ ಬಂದಿದ್ದಿರಿ. ಇಷ್ಟೆಲ್ಲಾ ಬದಲಾವಣೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ದ- ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಿ, ಮೊದಲು ಜನರು ಆಶೀರ್ವಾದ ಮಾಡಬೇಕು. ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಆಯ್ಕೆ ಮಾಡಬೇಕು. ಆಮೇಲೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಹೇಳಿದ್ದೇನೆ. ಈಗಲೂ ನಾನೇ ಸಿಎಂ, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಸಿಎಎಂದು ಪುನರುಚ್ಚರಿಸಿದರು.
ಈ ವೇಳೆ ಆರ್.ಅಶೋಕ್ ಇನ್ನೂ ಎರಡೂವರೇ ವರ್ಷ ನೀವೇ ಮುಖ್ಯಮಂತ್ರಿ ಆಗಿರಬೇಕು ಎನ್ನುವುದನ್ನು ನಾವು ಬಯಸುತ್ತೇವೆ. ಆದರೆ, ಸಿಎಲ್ಪಿ ಐದು ವರ್ಷ ಆಯ್ಕೆ ಮಾಡಿದ್ದೋ ಅಥವಾ ಎರಡುವರೆ ವರ್ಷಕ್ಕೋ ಎಂದು ಮರು ಪ್ರಶ್ನಿಸಿದರು. ಎರಡೂವರೆ ವರ್ಷ ಅಂತಾ ಹೇಳಿಲ್ಲ. ಎರಡೂವರೆ ವರ್ಷ ಸಿಎಂ ಎಂದು ತೀರ್ಮಾನ ಆಗಿಲ್ಲ. ಈಗ ನಾನೇ ಸಿಎಂ, ಮುಂದೆಯೂ ನಾನೇ ಇರುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಸಿದ್ದರಾಮಯ್ಯ ಹೇಳಿದರು.
ಇದರ ನಡುವೆ ಎದ್ದು ನಿಂತ ಮುನಿರತ್ನ, ಹಿಂದೆ ಸಿದ್ದರಾಮಯ್ಯ ಅವರು ಸವಾಲು ಹಾಕುವಾಗ ತೋಳು ತಟ್ಟುತ್ತಿದ್ದಿರಿ. ಈಗ ಅದೇ ರೀತಿ ತೋಳು ತಟ್ಟಿ, ನಾನೇ ಐದು ವರ್ಷಗಳ ಕಾಲ ಸಿಎಂ ಅಂತ ಹೇಳಿ. ಅದನ್ನು ನಾವು ಒಮ್ಮೆ ನೋಡಬೇಕು ಎಂದು ಕೀಚಾಯಿಸಿದರು.
ಆಗ ಆರ್. ಅಶೋಕ್ ಅವರು ಐದು ವರ್ಷ ವಿಪಕ್ಷ ನಾಯಕರಾಗಿ ಇರುತ್ತಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರಿಗೆ ಸುನೀಲ್ ಕುಮಾರ್, ಅಶೋಕ್ ಅವರೇ ಐದು ವರ್ಷ ವಿರೋಧ ಪಕ್ಷದ ನಾಯಕರು. ನೀವು ಹೇಳಿ ನಾನು ಐದು ವರ್ಷ ಸಿಎಂ ಅಂತಾ ಕಾಡಿಸಿದರು. ಹೀಗೆ ಕೆಲಕಾಲ ನಾಯಕತ್ವ ಬದಲಾವಣೆ ಕುರಿತು ನಾಯಕರ ಮಧ್ಯೆ ಸ್ವಾರಸ್ಯಕರ ಚರ್ಚೆ ಆಯಿತು.

