ಚಂದ್ರವಳ್ಳಿ ನ್ಯೂಸ್, ಮೈಸೂರು:
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯೇ 7 ಟೌನ್ಶಿಪ್ ಮಾಡಲು ತೀರ್ಮಾನ ಮಾಡಿ ಅದಕ್ಕಾಗಿ 300 ಕೋಟಿ ರೂ. ಹಣವನ್ನೂ ಮೀಸಲಿಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಬಂದಾಗ ಮಾಡಕ್ಕಾಗಲ್ಲ ಅಂತ ಹಣ ವಾಪಸ್ ಕೊಟ್ಟಿದ್ದಾರೆ. ದೇವೇಗೌಡರು ಸಿಎಂಗೆ ಬರೆದಿರುವ ಪತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅದನ್ನು ಡಿನೋಟಿಫೈ ಮಾಡಲು ತಯಾರಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ನಿರ್ಮಾಣಕ್ಕಾಗಿ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ದೇವೇಗೌಡರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಕುರಿತು ಡಿಕೆಶಿ ಅವರು ಪ್ರತಿಕ್ರಿಯಿಸಿದರು.
ಈ ಹಿಂದೆ ಡಿನೋಟಿಪೈ ಮಾಡಿದಾಗ ಹಣ ದೋಚಿಕೊಂಡ್ರು ಎನ್ನುವ ಆರೋಪ ಎದುರಿಸಿದ್ದೇನೆ. ಕೋರ್ಟ್, ಜೈಲು ಎಲ್ಲವೂ ಆಗಿದೆ. ನಾನು ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀನುಗಳ ವಿಚಾರವಾಗಿಯೂ ಇವರೇ ಆರೋಪಗಳನ್ನೆಲ್ಲ ಮಾಡಿದ್ದಾರೆ. ಹಾಗಾಗಿ ನಾನು ಇದನ್ನು ಮಾಡುವುದಿಲ್ಲ. ಇಡೀ ದೇಶವೇ ತಿರುಗಿ ನೋಡುವಂತೆ ಗ್ರೇಟರ್ ಬೆಂಗಳೂರು ಸಿಟಿಯನ್ನು ಮಾಡುತ್ತೇನೆ. ಈಗ ಯಾರು ಏನೇ ಹೇಳಿದರೂ ಗ್ರೇಟರ್ ಬೆಂಗಳೂರು ಮಾಡೇ ಮಾಡುತ್ತೇನೆ. ಇಂತಹ ಪುಣ್ಯ ದಿನದೊಂದು, ಪುಣ್ಯ ಭೂಮಿ ಮೈಸೂರಿನಲ್ಲಿ ನಾನಿದನ್ನು ಘೋಷಣೆ ಮಾಡುತ್ತೇನೆ ಎಂದು ಡಿಸಿಎಂ ಸವಾಲ್ ಹಾಕಿದರು.
ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿ ವಶಪಡಿಸಿಕೊಳ್ಳಬಾರದು ಎಂದು ಈಗ ದೇವೇಗೌಡರು ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಇದರ ಪಿತಾಮಹನೇ ಎರಡೆರಡು ಬಾರಿ ಸಿಎಂ ಆಗಿದ್ದವರು. ಆಗ ಯಾಕೆ ರೈತರ ಭೂಮಿ ಸ್ವಾಧೀನವನ್ನು ಕೈಬಿಡಲಿಲ್ಲ?. ಈ ಬಗ್ಗೆ ದೇವೇಗೌಡರೇ ಹೇಳಲಿ. ಇದರಲ್ಲಿ ರಾಜಕೀಯ ಬೇಡ. ಎಲ್ಲವೂ ನಿಮ್ಮ ಮಗ ಕುಮಾರಸ್ವಾಮಿ ಕಾಲದಲ್ಲಿ ಹಾಗೂ ನಿಮ್ಮ ಕಾಲದಲ್ಲೇ ಆಗಿದ್ದು ಎಂದು ದೇವೇಗೌಡರಿಗೆ ಡಿಕೆಶಿ ಟಾಂಗ್ ನೀಡಿದರು.
ಬೆಂಗಳೂರು ಸುತ್ತಮುತ್ತ ಹತ್ತು ಸಾವಿರ ಎಕರೆಯಲ್ಲಿ ಬೆಂಗಳೂರಿಗಿಂತ ಉತ್ತಮ ಸಿಟಿಯನ್ನು ನಿರ್ಮಾಣ ಮಾಡುತ್ತೇನೆ. ಜಮೀನು ನೀಡಿದ ರೈತರಿಗೆ ಹಣ ನೀಡುತ್ತೇವೆ. ಇಲ್ಲದಿದ್ದರೆ ಅಭಿವೃದ್ಧಿಪಡಿಸಿದ ಭೂಮಿ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಸ್ಥಳ ಪರಿಶೀಲನೆ:
ಕಾವೇರಿ ನಮ್ಮ ಜೀವನದಿ. ಅದಕ್ಕಾಗಿ ಕಾವೇರಿ ತಾಯಿಗೆ ಆರತಿ ಮಾಡಲು ಬಜೆಟ್ನಲ್ಲಿ ಹಣ ಮೀಸಲಿಡಲಾಗಿದೆ. ಕೆಆರ್ಎಸ್ನಲ್ಲಿ ನಾಲ್ಕು ಇಲಾಖೆಗಳ ಅಧಿಕಾರಿಗಳ ತಂಡ ಕಾವೇರಿ ಆರತಿಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಕುರಿತು ಸಭೆ ನಡೆಸುತ್ತೇವೆ. ಸಭೆಯಲ್ಲಿ ಎಲ್ಲ ರೂಪುರೇಷೆಗಳನ್ನು ಸಿದ್ಧ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ತಾವು ಮುಖ್ಯಮಂತ್ರಿ ಆಗುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟ ಡಿ.ಕೆ.ಶಿವಕುಮಾರ್, ಪ್ರಯತ್ನಗಳು ಯಾವತ್ತೂ ವಿಫಲವಾಗುವುದಿಲ್ಲ ಎಂದು ಡಿಸಿಎಂ ಮಾರ್ಮಿಕವಾಗಿ ಉತ್ತರಿಸಿ ಹೊರಟು ಹೋದರು.