ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿಮ್ಮ ಮುಂದಿನ ಹೆಜ್ಜೆಗಳನ್ನು ಗುರುತಿಸಿಕೊಳ್ಳಿ..! ಬೆಳಗಿನ ರೈಲಿಗೆ ಗಂಡ ಬೇಗನೆ ಮನೆಯನ್ನು ಬಿಡಬೇಕಾಗಿತ್ತು. ಹೆಂಡತಿ ಒಂದು ಅಂಚೆಯ ಲಕೋಟೆಯನ್ನು ತಂದು “ಇದು ಬಹಳ ಮುಖ್ಯವಾದ ಪತ್ರ. ನಾಳೆಯೇ ಅಮ್ಮನಿಗೆ ಇದು ತಲುಪಬೇಕು. ನೀನು ಪೇಟೆ ತಲುಪಿದಾಗ ಮರೆಯದೆ ಇದನ್ನು ಅಂಚೆಪೆಟ್ಟಿಗೆಗೆ ಹಾಕು” ಎಂದು ಹೇಳಿ ಗಂಡನ ಕೈಯಲ್ಲಿ ಕೊಟ್ಟಳು.
ಹ್ಞೂಂ ಎಂದ ಗಂಡ ಒಂದು ಗಂಟೆ ಪ್ರಯಾಣದ ನಂತರ ಪೇಟೆ ತಲುಪಿ ರೈಲ್ವೆನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮರತೇಬಿಟ್ಟ, ಆಫೀಸಿಗೆ ಸಮಯಕ್ಕೆ ಸರಿಯಾಗಿ ಹೋಗುವ ಅವಸರದಲ್ಲಿ ಹೆಂಡತಿ ಕೊಟ್ಟಿದ್ದ ಪತ್ರ ಕೋಟಿನ ಜೇಬಿನಲ್ಲಿ ಹಾಗೆಯೇ ಉಳಿದುಕೊಂಡುಬಿಟ್ಟಿತು. ರೈಲ್ವೆ ನಿಲ್ದಾಣದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ “ನಿಮ್ಮ ಹೆಂಡತಿ ಕೊಟ್ಟ ಪತ್ರ ನೆನಪಿದೆಯೇ?” ಎಂದು ಕೇಳಿದ.
ಆಗ ನೆನೆಸಿಕೊಂಡು ಹತ್ತಿರದಲ್ಲಿದ್ದ ಅಂಚೆ ಪೆಟ್ಟಿಗೆಗೆ ಹಾಕಲು ಧಾವಿಸುತ್ತಿದ್ದಂತೆಯೇ ಮತ್ತೊಬ್ಬ ಅಪರಿಚಿತ ವ್ಯಕ್ತಿ ನಿಮ್ಮ ಹೆಂಡತಿ ಕೊಟ್ಟ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಲು ಮರೆಯಬೇಡಿ” ಎಂದು ಜ್ಞಾಪಿಸಿದ. ಅವಸರವಾಗಿ ಅಂಚೆಪೆಟ್ಟಿಗೆಯಲ್ಲಿ ಪತ್ರವನ್ನು ಹಾಕಿ ರೈಲ್ವೆನಿಲ್ದಾಣದಿಂದ ನಿರ್ಗಮಿಸುತ್ತಿದ್ದಂತೆಯೇ ಇನ್ನೋರ್ವ ಅಪರಿಚಿತ ಮಹಿಳೆ ಮುಗುಳ್ನಗುತ್ತಾ “ನಿಮ್ಮ ಪತ್ನಿಯು ಕೊಟ್ಟಿದ್ದ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಿದಿರಾ?” ಎಂದು ಕೇಳಿದಳು.
“ಓ ದೇವರೇ! ನನ್ನ ಹೆಂಡತಿ ಕೊಟ್ಟ ಪತ್ರ ಇವರಿಗೆಲ್ಲಾ ಹೇಗೆ ಗೊತ್ತು, ಈಗ ತಾನೆ ಅಂಚೆಪೆಟ್ಟಿಗೆಗೆ ಹಾಕಿದೆನಲ್ಲಾ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ. ಅಪರಿಚಿತ ವ್ಯಕ್ತಿಗಳು ಹಾಗೆ ಕೇಳಲು ಕಾರಣ ಅವನ ಹೆಂಡತಿ ಗಂಡನ ಬೆನ್ನ ಹಿಂದೆ ಕೋಟಿನ ಮೇಲೆ ಒಂದು ಚೀಟಿಯನ್ನು ಅಂಟಿಸಿದ್ದಳು. ಅದರಲ್ಲಿ ಹೀಗೆ ಬರೆದಿದ್ದಳು: “ನಾನು ಕೊಟ್ಟ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಬೇಕೆಂದು ದಯಮಾಡಿ ನನ್ನ ಗಂಡನಿಗೆ ಜ್ಞಾಪಿಸಿರಿ!”
ಸಹೃದಯ ಓದುಗರೇ! ಇಂದಿನಿಂದ ಹೊಸ ವರ್ಷ ಆರಂಭವಾಗಿದೆ. ನಿನ್ನೆ ಸರಿರಾತ್ರಿಯಿಂದ ಕೊನೆಗೊಂಡ 2024ರ ಘಟನಾವಳಿಗಳು ನಾಲ್ಕನೆಯ ಕಥೆಯ ಗಂಡನ ಬೆನ್ನ ಹಿಂದೆ ಅಂಟಿಸಿದ್ದ ಚೀಟಿಯಂತೆ ನಿಮ್ಮ ಬೆನ್ನ ಹಿಂದೆಯೇ ಇವೆ. ಅವುಗಳನ್ನು ಬೇರೆಯವರು ಓದಿ ನಿಮ್ಮ ಕರ್ತವ್ಯವೇನೆಂದು ಎಚ್ಚರಿಸುವ ಮೊದಲು ನೀವೇ ಓದಿಕೊಂಡು ಹೊಸ ವರ್ಷದಲ್ಲಿ ಮುನ್ನಡೆಯುವ ಪ್ರಯತ್ನ ಮಾಡಿರಿ.
ನಿಮ್ಮ ಬೆನ್ನ ಹಿಂದಿರುವುದನ್ನು ಓದಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಿಮ್ಮ ಸ್ನೇಹಿತರು ಮತ್ತು ಹಿತೈಷಿಗಳು ಎಚ್ಚರಿಸಿದಾಗಲಾದರೂ ನಿಮ್ಮ ಮುಂದಿನ ಹೆಜ್ಜೆಗಳನ್ನು ಗುರುತಿಸಿಕೊಳ್ಳಿ! ತಿಳಿಯದೆ ಮಾಡಿದ ತಪ್ಪು ತಪ್ಪೇ ಆದರೂ ಕ್ಷಮ್ಯ; ತಿಳಿದೂ ಮಾಡುವ ತಪ್ಪು ಬರೀ ತಪ್ಪಲ್ಲ, ಅಕ್ಷಮ್ಯ ಅಪರಾಧ! ನಿಮ್ಮ ನೆನಪಿನಲ್ಲಿರಲಿ!
ಹೊಸ ವರ್ಷವು ಹೊಸ ಬೆಳಕು, ಹೊಸ ಸುಖ ಸಂತೋಷವನ್ನು ತರುವಂತಾಗಲಿ, ಎಂಬುದೇ ನಮ್ಮ ಹಾರೈಕೆ…!ಲೇಖನ–ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ. 01-01-2025 ಬುಧವಾರ.