ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನ ಸಾಮಾನ್ಯರ ಅತ್ಯಂತ ಪ್ರಿಯವಾದ ಬೆಳಗಿನ ತಿಂಡಿ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ಆಗಿದೆ, ಅಲ್ಲದೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಎಚ್ಐವಿ ಹಾಗೂ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ಯಾಟೂನಿಂದ ಆರೋಗ್ಯ ಸಮಸ್ಯೆಗಳ ಸಾಧ್ಯತೆ ವಿಚಾರವಾಗಿ ಕೇಂದ್ರ ಸರ್ಕಾರ ನಿಯಮ ರೂಪಿಸಲು ಅವಕಾಶ ಇದೆ. ಟ್ಯಾಟೂ ಇಂಕ್ ಕಾಂತಿ ವರ್ಧಕಗಳ ಅಡಿಯಲ್ಲಿ ತರಲು ಪತ್ರ ಬರೆಯಲಾಗುವುದು. ಆಯುಕ್ತರಿಗೆ ಪತ್ರ ಬರೆದು ಮನವಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಜನವರಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಈ ಪೈಕಿ 26 ಮಾದರಿಗಳು ಅಸುರಕ್ಷಿತವಾಗಿವೆ ಎಂಬುದು ತಿಳಿದುಬಂದಿದೆ. 28 ಕಳಪೆಯಾಗಿವೆ ಎಂದು ಆರೋಗ್ಯ ಸಚಿವರು ತಿಳಿಸಿದರು. ಕಳೆದ 2025ರ ಜನವರಿಯಲ್ಲಿ 681 ರಷ್ಟು ಇಡ್ಲಿ ಸ್ಯಾಂಪಲ್ಸ್ ಪಡೆಯಲಾಗಿದೆ. ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಸುತ್ತಿರುವುದು ಗಮನಕ್ಕೆ ಬಂದಿದ್ದು ಇದರಿಂದ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇದೆ. ಘಟನೆ ಸಂಬಂಧ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ ಎಂದು ಗುಂಡೂರಾವ್ ತಿಳಿಸಿದರು.
ಔಷಧಗಳ ಗುಣಮಟ್ಟದ ಬಗ್ಗೆಯೂ ಮಾಹಿತಿ ನೀಡಿದ ಅವರು, 1133 ಔಷಧ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ, 938 ಔಷಧಗಳು ಗುಣಮಟ್ಟ ಹೊಂದಿವೆ ಎಂದು ಸಚಿವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಆಯುಕ್ತ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.