ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಯಿ ಮರಣ ಮತ್ತು ಶಿಶು ಮರಣ ತಡೆಗಟ್ಟಲು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಬಹು ಮುಖ್ಯ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಕುರಿತು ಐಇಸಿ ಕಾರ್ನರ್ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಬಳಕೆಯಿಂದ ಜನಸಂಖ್ಯೆ ನಿಯಂತ್ರಣ ಒಂದೆಡೆಯಾದರೆ ತಾಯಿಯ ಆರೋಗ್ಯ ಸುಧಾರಿಸಿ ಮುಂದೆ ಜನಿಸುವ ಮಗು ಆರೋಗ್ಯವಂತ ಮಗು ಜನಿಸುತ್ತದೆ ಎಂದರು.
ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಪವಿತ್ರ ಮಾತನಾಡಿ, ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳಲು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ಹೆಣ್ಣು ಮಕ್ಕಳಿಗೆ ಮೂರು ತಿಂಗಳಿಗೊಮ್ಮೆ ಡಿಂಪ ಇಂಜೆಕ್ಷನ್, ವಾರಕ್ಕೊಮ್ಮೆ ಛಾಯಾ ಮಾತ್ರೆ ಹಾಗೂ ಕಾಪರ್ ಟಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯ ಇವೆ ಹಾಗೂ
ಶಾಶ್ವತ ವಿಧಾನಗಳಾದ ಲೆಪೋಸ್ಕೋಪಿಕ್, ಟುಬೆಕ್ಟಮಿ ಇವುಗಳ ಸದ್ಬಳಕೆ ಮಾಡಿಕೊಂಡು ಚಿಕ್ಕ ಕುಟುಂಬ ಹೊಂದುವುದರ ಜೊತೆಗೆ ಸಂತಸದ ಜೀವನ ನಡೆಸಬೇಕು ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಜನಸಂಖ್ಯಾ ನಿಯಂತ್ರಣಕ್ಕಾಗಿ ಕುಟುಂಬ ಕಲ್ಯಾಣ ಶಾಶ್ವತ ವಿಧಾನಗಳಲ್ಲಿ ಪುರುಷರಿಗೆ ಎನ್ ಎಸ್ ವಿ ಶಸ್ತ್ರಚಿಕಿತ್ಸೆ ಒಂದು ಸುಲಭ ಸರಳ ವಿಧಾನವಾಗಿದ್ದು, ಹೊಲಿಗೆ ಇಲ್ಲ, ಗಾಯ ಇಲ್ಲ, ಆಸ್ಪತ್ರೆಯಲ್ಲಿ ತಂಗುವ ಹಾಗಿಲ್ಲ, ಪುರುಷತ್ವಕ್ಕೆ ಹಾನಿ ಇಲ್ಲ, ಇಂತಹ ವಿಧಾನಕ್ಕೆ ಪುರುಷರ ಸಹಭಾಗಿತ್ವ ಬಹು ಮುಖ್ಯ ಎಂದು ಹೇಳಿದರು.
ರಕ್ತಹೀನತೆ, ಹೃದಯದ ತೊಂದರೆ, ಇನ್ನಿತರ ಅನಾರೋಗ್ಯ ಸಮಸ್ಯೆ ಇರುವ ತಾಯಂದಿರು ಮಕ್ಕಳು ಬೇಡವೆಂದು ನಿರ್ಧರಿಸಿದಾಗ ತಾವೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಿಂತ ತಮ್ಮ ಪತಿಯವರಿಗೆ ಮನವೊಲಿಸಿ ಎನ್ ಎಸ್ ವಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಸುಖಮಯ ದಾಂಪತ್ಯ ಜೀವನ ನಡೆಸಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಜನಸಂಖ್ಯಾ ಹೆಚ್ಚಳದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಯುಷ್ ವೈದ್ಯೆ ಡಾ.ಶಿಲ್ಪ, ದಂತ ವೈದ್ಯಾಧಿಕಾರಿ ಡಾ ಬಿಂದಿಯಾ, ಹಿರಿಯ ಫಾರ್ಮಸಿ ಅಧಿಕಾರಿ ಮೋಹನ್ ಕುಮಾರ್, ಶುಶ್ರೂಷಣಾಧಿಕಾರಿಗಳಾದ ನಾಗವೇಣಿ, ಜ್ಯೋತಿ, ರೇಣುಕಾ. ಶ್ಯಾಮಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್, ಆಶಾ ಕಾರ್ಯಕರ್ತೆಯರಾದ ವನಜಾಕ್ಷಮ್ಮ, ಉಮಾದೇವಿ ಹಾಗೂ ಸಾರ್ವಜನಿಕರು ಇದ್ದರು.