ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು? – ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರ ಲೇಟೆಸ್ಟ್ ನುಡಿಮುತ್ತುಗಳು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಮಗೆ ಈಗ ದಿಢೀರನೆ ಯಾವ ಮರದ ಕೆಳಗೆ ಜ್ಞಾನೋದಯ ಆಯ್ತು? ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು ಎಂದು ಈಗ ಪೇಚಾಡುತ್ತಿದ್ದೀರಲ್ಲ, ಚುನಾವಣೆ ಸಂದರ್ಭದಲ್ಲಿ ಈ ಬುದ್ಧಿ ಎಲ್ಲಿ ಹೋಗಿತ್ತು? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಯಾರೋ ಕೆಲಸಕ್ಕೆ ಬಾರದ, ಹೊಣೆಗಾರಿಕೆ ಇಲ್ಲದ ಚುನಾವಣಾ ತಂತ್ರಜ್ಞರ ಮಾತು ಕೇಳಿ ಬೇಕಾಬಿಟ್ಟಿ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ವೋಟು ಗಿಟ್ಟಿಸಿಕೊಂಡು ಅಧಿಕಾರ ಹಿಡಿದ ಮೇಲೆ ಈಗ ಲೊಳಲೊಟ್ಟೆ ಎಂದು ಪೇಚಾಡಿದರೆ ಏನು ಪ್ರಯೋಜನ? ಎಂದು ಅವರು ಪ್ರಶ್ನಿಸಿದ್ದಾರೆ.
ಅಧಿಕಾರಕ್ಕಾಗಿ ರಾಜ್ಯದ ಹಣಕಾಸು ಪರಿಸ್ಥಿತಿಯನ್ನ ಹಾಳುಗೆಡವಿದ ಪಕ್ಷ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷ ಕರ್ನಾಟಕದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದು ಮಾತ್ರ ಗ್ಯಾರೆಂಟಿ ಎಂದು ಅಶೋಕ್ ತೀಕ್ಷ್ಣವಾಗಿ ತಿಳಿಸಿದ್ದಾರೆ.
ಗ್ಯಾರೆಂಟಿ ಯೋಜನೆಗಳನ್ನ ಯಾವಾಗ ನಿಲ್ಲಿಸುತ್ತೀರಿ ಎಂದು ಜನರ ಮುಂದೆ ಪ್ರಾಮಾಣಿಕವಾಗಿ ಹೇಳಿ ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹ ಮಾಡಿದ್ದಾರೆ.