ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಬದುಕು ಕೊಟ್ಟರೆ, ಬಿಜೆಪಿ ಅದನ್ನು ಕಸಿಯಲು ಹೊರಟಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.
ಮನರೇಗಾ ಪುನರ್ ಸ್ಥಾಪನೆವರೆಗೂ ನಮ್ಮ ಹೋರಾಟ ನಿರಂತರ. ಸ್ವಾತಂತ್ರ್ಯದ ಮರುಕ್ಷಣದಿಂದಲೇ ದೇಶ ಕಟ್ಟುವ ಕೆಲಸ ಮಾಡಿದ್ದು ನಮ್ಮ ಕಾಂಗ್ರೆಸ್. ನೀರಾವರಿ ಯೋಜನೆಗಳು, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಭೂ-ಸುಧಾರಣೆಗಳ ಮೂಲಕ ಗ್ರಾಮೀಣ ಬದುಕನ್ನು ಕಟ್ಟಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುತ್ತ ಸಾಗಿದ್ದು ಕಾಂಗ್ರೆಸ್ ಎಂದು ಸಚಿವರು ತಿಳಿಸಿದರು.
ಗ್ರಾಮೀಣ ಜನತೆಗೆ ಉದ್ಯೋಗ ಒಂದು ಸಾಂವಿಧಾನಿಕ ಹಕ್ಕು ಎಂಬುದನ್ನು ಪರಿಗಣಿಸಿ ಪ್ರತಿ ವರ್ಷ 100 ದಿನಗಳ ಉದ್ಯೋಗ ನೀಡುವ ಯೋಜನೆ ರೂಪಿಸಿ ಅದಕ್ಕೆ ಮಹಾತ್ಮ ಗಾಂಧೀಜಿಯವರ ಹೆಸರಿಟ್ಟು ಸಾರ್ಥಕತೆ ಮೆರೆದಿದ್ದು ಕಾಂಗ್ರೆಸ್.
ರಾಜ್ಯದಲ್ಲಿಯೂ ಕೆರೆ ಕಟ್ಟೆ ತುಂಬಿಸಿ, ಬರದ ನಾಡಿಗೂ ನೀರು ಹರಿಸಿ, ಬರಡು ನೆಲದಲ್ಲೂ ರೈತ ಬಂಗಾರ ಬೆಳೆಯುವಂತೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಬಡವರಿಗಾಗಲಿ, ರೈತರಿಗಾಗಲಿ, ಕೂಲಿ ಕಾರ್ಮಿಕರಿಕಾಗಾಗಲಿ ಯಾವ ಒಂದು ಹೊಸ ಯೋಜನೆಯನ್ನೂ ನೀಡದ ಬಿಜೆಪಿಯು ನಮ್ಮ & ಗಾಂಧೀಜಿಯ ಸ್ವಾವಲಂಬಿ ಗ್ರಾಮದ ಕನಸಿನ ‘ಮನರೇಗಾ‘ ಯೋಜನೆಯನ್ನು ರದ್ದುಗೊಳಿಸಿ, ‘ವಿಬಿ ಗ್ರಾಮ್ ಜಿ‘ ಎಂಬ ಯೋಜನೆ ಜಾರಿ ಹೆಸರಿನಲ್ಲಿ ಗ್ರಾಮೀಣರ ಬದುಕಿಗೆ ಮರಣ ಶಾಸನ ಬರೆಯುತ್ತಿದೆ. ಇದನ್ನು ಕೈಬಿಟ್ಟು ಮನರೇಗಾ ಪುನರ್ ಸ್ಥಾಪಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಎಂ.ಬಿ ಪಾಟೀಲ್ ಎಚ್ಚರಿಸಿದರು.

