ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಧ್ಯೆ ಮಾತಿನ ಯುದ್ಧ ತಾರಕಕ್ಕೇರುವ ಸಂದರ್ಭದಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನನ್ನ ಹುಳುಕು ಏನಿದೆ ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುತ್ತೇನೆ ಎಂದು ಏಕವಚನದಲ್ಲೇ ತರಾಟೆ ತೆಗೆದುಕೊಂಡ ಪ್ರಸಂಗ ಜರುಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಶಿವಕುಮಾರ್, ಯಾರು ಬೇಕು ಎನ್ನುವುದನ್ನ ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿ ಕುಮಾರಸ್ವಾಮಿ ಅವರನ್ನು ಬಹಿರಂಗ ಚರ್ಚೆಗೆ ಡಿಕೆ ಶಿವಕುಮಾರ್ ಆಹ್ವಾನಿಸಿದ್ದಾರೆ.
ನಗರದ ಸಿಟಿ ಸಿವಿಲ್ ಕೋರ್ಟ್ ಬಳಿ ಶಿವಕುಮಾರ್ ಜೊತೆ ಮಾತನಾಡಲು ಆಗುತ್ತಾ, ಆ ಯೋಗ್ಯತೆ ಉಳಿಸಿಕೊಂಡಿದ್ದಾರಾ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ – ವಿವಾದ ಇರಬೇಕು. ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ. ಕೇಂದ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಇದ್ದಾರೆ, ಏನು ಮಾಡಿಕೊಳ್ಳುತ್ತಾರೋ ನೋಡುವೆ, ಈ ಮಗ(ಡಿಕೆಶಿ) ಯಾವುದಕ್ಕೂ ಕೇರ್ ಮಾಡೋನಲ್ಲ ಎಂದು ಎಚ್ಚರಿಸಿ ನನ್ನ ವಿರುದ್ಧ ಇರುವ ದಾಖಲೆ ತಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ ಎಂದು ತಿರುಗೇಟು ನೀಡಿ ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಬಳಿ ಸಾಕ್ಷಿಗುಡ್ಡೆ ಇದ್ದರೆ, ಜನಕ್ಕೆ, ರಾಜ್ಯಕ್ಕೆ ಒಳ್ಳೆಯದು ಮಾಡಿದ್ದರೆ ಅದನ್ನು ದಾಖಲೆ ಸಮೇತ ಬಂದು ಹೇಳಲಿ. ಜನ ಅವರಿಗೆ ಮತ ಕೊಟ್ಟು ದೊಡ್ಡ ಹುದ್ದೆ ನೀಡಿದ್ದಾರೆ. ಸಾರ್ವಜನಿಕವಾಗಿ ಬಂದು ಉತ್ತರ ನೀಡಲಿ. ಕೇವಲ ಸುಳ್ಳು ಆರೋಪ ಮಾಡುತ್ತಾ, ಬೇರೆಯವರಿಗೆ ಹೆದರಿಸುತ್ತಾ ಹೋಗುವುದಲ್ಲ. ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆ ಎಂದು ಹೇಳಿದಂತೆ ಅಲ್ಲ. ಬಹಿರಂಗ ಚರ್ಚೆಗೆ ಬರಲಿ. ಇದರಲ್ಲಿ ಅವಮಾನ ಆಗುವಂತದ್ದು ಏನೂ ಇಲ್ಲ ಎಂದು ಶಿವಕುಮಾರ್ ಆಗ್ರಹ ಮಾಡಿದರು.
ನಾನು ಸಾತನೂರಿಗೆ ಅವರು ಸಿಎಂ ಆಗಿದ್ದಾಗ ಚರ್ಚೆಗೆ ಹೋಗಲಿಲ್ಲವೇ?, ನಾನು ಏನು ಮಾಡಿದ್ದೇನೆ, ನನ್ನ ಹುಳುಕು ಏನಿದೆ ಎಂಬುದನ್ನು ನೀನು ಹೇಳು, ನಿನ್ನದು ಏನಿದೆ ಎಂದು ನಾನು ಹೇಳುತ್ತೇನೆ. ನಂತರ ಜನ ತೀರ್ಮಾನ ಮಾಡುತ್ತಾರೆ. ಅವರು ನನ್ನ ಯಾವ ವಿಚಾರ ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅವರ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲ. ಈ ಡಿ. ಕೆ. ಶಿವಕುಮಾರ್ ಅದಕ್ಕೆಲ್ಲಾ ಹೆದರುವ ಮಗ ಅಲ್ಲ ಎಂದು ಪುನರುಚ್ಚರಿಸಿದರು.
8-9 ಸ್ಥಾನಕ್ಕೆ ಕುಸಿತ:
ಮುಂದಿನ ಎರಡೂವರೆ ವರ್ಷಗಳ ನಂತರ ನಮ್ಮ ಸರ್ಕಾರ ಬರುತ್ತದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಈ ಡೈಲಾಗ್ ಎಷ್ಟು ಸಾರಿ ಹೇಳಿ ಆಗಿದೆ. ಕೇಳಿ, ಕೇಳಿ ಸಾಕಾಗಿದೆ. ಇವರ ನಾಯಕತ್ವದಲ್ಲಿ ಇವರ ಪಕ್ಷ 18 ಸ್ಥಾನಕ್ಕೆ ಇಳಿದಿದೆ. ಮುಂದಿನ ಬಾರಿ 8 ಅಥವಾ 9 ಸ್ಥಾನಕ್ಕೆ ಕುಸಿತ ಆಗಲಿದೆ ಎಂದು ಡಿಸಿಎಂ ತಿರುಗೇಟು ನೀಡಿದರು.
ಎ ಖಾತಾ, ಬಿ ಖಾತಾ ವಿಚಾರದಲ್ಲಿ ಯಾವ ಭ್ರಷ್ಟಾಚಾರ ನಡೆಯುತ್ತಿದೆ? ಬೆಂಗಳೂರು ನಾಗರಿಕರ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಲು, ಅವರಿಗೆ ಮುಂದೆ ಬ್ಯಾಂಕ್ ಸಾಲ ಹಾಗೂ ಇತರೆ ಸೌಲಭ್ಯ ಸಿಗಬೇಕು. ಜನರಿಗೆ ಉತ್ತಮ ಸೌಕರ್ಯ ಒದಗಿಸಬೇಕು, ಜನರು ತೆರಿಗೆ ಪಾವತಿಸುವಂತಾಗಬೇಕು ಎಂಬ ಉದ್ದೇಶದಿಂದ ನಾವು ಈ ಯೋಜನೆ ಮಾಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

