ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಎಂದು ಜೆಡಿಎಸ್ ನಟ ಕಮಲ್ ಹಾಸನ್ ವಿರುದ್ಧ ವಾಗ್ದಾಳಿ ಮಾಡಿದೆ.
ಕನ್ನಡದ ಬಗ್ಗೆ ಉದ್ಧಟತನದಿಂದ ಮಾತಾಡಿರುವ ಬಹುಬಾಷಾ ನಟ ಕಮಲ್ ಹಾಸನ್ ಸಮಸ್ತ ಕನ್ನಡಿಗರ ಕ್ಷಮೆ ಕೇಳಬೇಕು. ಕಮಲ್ ಹಾಸನ್ ಅವರೇ ನಿಮ್ಮ ಪ್ರಚಾರದ ತೆವಲಿಗೆ ಮತ್ತೊಂದು ಭಾಷೆಯನ್ನು ಹೀಯಾಳಿಸುವುದು ತರವೇ ? ಬಹು ಭಾಷಾ ನಟರಾಗಿ ಇಂತಹ ಅಪ್ರಬುದ್ಧ ಹೇಳಿಕೆ ನೀಡುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.
ತಮಿಳು ಭಾಷೆಯ ಮೇಲಿನ ನಿಮ್ಮ ಅಭಿಮಾನವನ್ನು ತೋರ್ಪಡಿಸಲು ಕನ್ನಡಕ್ಕೆ ಅಪಮಾನಿಸುವುದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ದ್ರಾವಿಡ ಭಾಷೆಗಳಲ್ಲಿ ತಮಿಳಿನಂತೆ ಕನ್ನಡವೂ ಒಂದು ಸ್ವತಂತ್ರ ಭಾಷೆ. ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆ. ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬುದನ್ನು ಇತಿಹಾಸ ತಜ್ಞರೇ ಒಪ್ಪಿದ್ದಾರೆ ಮೆಚ್ಚಿದ್ದಾರೆ. ವಿಶ್ವದ ಅತ್ಯಂತ ಸುಂದರವಾದ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿದೆ.
ಭಾಷೆಯ ಬಗ್ಗೆ ಸರ್ಟಿಫಿಕೇಟ್ ಕೊಡಲು ನೀವೇನು ಭಾಷಾ ವಿಜ್ಞಾನಿಯೇ ? ಭಾಷಾ ವಿಜ್ಞಾನ ಗೊತ್ತಿರದ ಅವಿವೇಕಿಗಳಿಂದ ಮಾತ್ರ ಇನ್ನೊಂದು ಭಾಷೆ ಬಗ್ಗೆ ಲಘುವಾಗಿ ಮಾತಾನಾಡಲು ಸಾಧ್ಯ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಕನ್ನಡ ಭಾಷೆಯು ಸಾವಿರಾರು ವರ್ಷಗಳಿಗೂ ಹೆಚ್ಚು ಪುರಾತನವಾದ ಚಾರಿತ್ರಿಕ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಭಾಷೆ ಎಂಬುದನ್ನು ತಾವು ಮೊದಲು ಅರಿಯಿರಿ ಎಂದು ಜೆಡಿಎಸ್ ತಾಕೀತು ಮಾಡಿದೆ.