ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಭವಿಷ್ಯವನ್ನು ಹಾಳು ಮಾಡಲು ಒಂದು ಸಂಸ್ಥೆ ಬಯಸಿದೆ. ಆ ಸಂಸ್ಥೆಯ ಹೆಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್). ಶಿಕ್ಷಣ ವ್ಯವಸ್ಥೆಯು ಅದರ ಕೈಗೆ ಸಿಕ್ಕಲ್ಲಿ, ದೇಶವೇ ನಾಶವಾಗಲಿದೆ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಈಗಾಗಲೇ ಶಿಕ್ಷಣ ವ್ಯವಸ್ಥೆಯು ಮೆಲ್ಲಗೆ ಆರ್‌ಎಸ್‌ಎಸ್‌ಕೈಗೆ ಹೋಗುತ್ತಿದೆ. ಇದು ಮುಂದುವರಿದಲ್ಲಿ ಯಾರೊಬ್ಬರಿಗೂ ಕೆಲಸ ಸಿಗುವುದಿಲ್ಲ ಮತ್ತು ಇಡೀ ದೇಶದ ಕಥೆಯೇ ಮುಗಿಯಲಿದೆ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಹುದ್ದೆಗಳಲ್ಲಿ ಆರ್‌ಎಸ್‌ಎಸ್‌ನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ಶಿಫಾರಸು ಮಾಡುವ ವ್ಯಕ್ತಿಗಳನ್ನೇ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ನೇಮಕ ಮಾಡಲಾಗುತ್ತದೆ. ಇದನ್ನು ತಡೆಯಬೇಕಿದೆ ಎಂಬುದನ್ನು ವಿದ್ಯಾರ್ಥಿ ಸಂಘಟನೆಗಳೇ ತಿಳಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.