ಹೊಸದಾಗಿ ಜಾತಿ ಗಣತಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡದಿದ್ದರೆ ಮತ್ತೆ ಒಕ್ಕಲಿಗ ಸಂಘದಿಂದ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ
, ಶೈಕ್ಷಣಿಕ (ಜಾತಿಗಣತಿ) ಸಮೀಕ್ಷೆ ಹೊಸದಾಗಿ ಮಾಡಲು ಸರ್ಕಾರ ತೀರ್ಮಾನಿಸಿರುವುದನ್ನು ರಾಜ್ಯ ಒಕ್ಕಲಿಗರ ಸಂಘ ಸ್ವಾಗತಿಸಿದೆ.

- Advertisement - 

ಬೆಂಗಳೂರಿನ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯು ವೈಜ್ಞಾನಿಕವಾಗಿಲ್ಲ. ಮರುಸಮೀಕ್ಷೆ ಮಾಡಬೇಕು ಎಂಬ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಜಾತಿಗಣತಿಯು ವೈಜ್ಞಾನಿಕವಾಗಿಲ್ಲ. ಪ್ರತಿ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿಲ್ಲ. ಅಂಕಿ – ಅಂಶಗಳು ದೋಷಪೂರಿತವಾಗಿವೆ. ಹಾಗಾಗಿ, ಮತ್ತೆ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಲಾಗಿತ್ತು ಎಂದು ಹೇಳಿದರು.

- Advertisement - 

ಹತ್ತು ವರ್ಷಗಳಷ್ಟು ಹಳೆಯ ದತ್ತಾಂಶಗಳನ್ನು ಒಳಗೊಂಡಿದ್ದು, ಮರು ಸಮೀಕ್ಷೆಯನ್ನು ಸರ್ಕಾರ ನಡೆಸಬೇಕು ಎಂದು ನಮ್ಮ ಸಂಘದಿಂದ ಒತ್ತಾಯಿಸಲಾಗಿತ್ತು. ಸರ್ಕಾರ ಹಠಕ್ಕೆ ಬಿದ್ದು ಹತ್ತು ವರ್ಷಗಳಷ್ಟು ಹಳೆಯದಾದ ಜಾತಿಗಣತಿ ವರದಿ ಅನುಷ್ಠಾನ ಮಾಡಲು ಮುಂದಾದರೆ, ಒಕ್ಕಲಿಗರ ಸಂಘವು ವಿವಿಧ ಸಂಘಟನೆಗಳ ಜತೆಗೂಡಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದೆವು ಎಂದು ಅವರು ತಿಳಿಸಿದರು.

ಜಾತಿ ಗಣತಿ ವಿಚಾರದಲ್ಲಿ ಸರ್ಕಾರ ಮರುಸಮೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿರುವುದು ಸಮಂಜಸವಾಗಿದೆ. ನಾವು ಇದುವರೆಗೂ ಪ್ರಸ್ತಾಪ ಮಾಡುತ್ತಿದ್ದ ವಿಚಾರಗಳನ್ನೇ ಮುಂದಿಟ್ಟು ಮರು ಸಮೀಕ್ಷೆಗೆ ಸೂಚಿಸಲಾಗಿದೆ. ಹೀಗಾಗಿ, ನಾವು ಮೊದಲಿನಿಂದಲೂ ವಾಸ್ತವಿಕ ಅಂಶಗಳ ಆಧಾರದ ಮೇಲೆ ಕಾಂತರಾಜು ಅವರ ವರದಿ ಅನುಷ್ಠಾನ ಬೇಡವೆಂದು ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಆದರೆ, ನಾವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವುದಕ್ಕೆ ಮತ್ತು ವೈಜ್ಞಾನಿಕ ವರದಿ ಅನುಷ್ಠಾನಕ್ಕೆ ವಿರೋಧ ಮಾಡಿರಲಿಲ್ಲ ಎಂದು ತಿಳಿಸಿದರು.

- Advertisement - 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಿಗೆ ಒಕ್ಕಲಿಗ ಸಂಘದಿಂದ ಮನವಿ ಪತ್ರಗಳನ್ನು ಸಲ್ಲಿಸಿದ್ದೆವು. ಜೊತೆಗೆ ಕಾಂತರಾಜು ಅವರ ನಂತರ ಜಯಪ್ರಕಾಶ್ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಮತ್ತೆ ಮನೆ ಮನೆ ಸಮೀಕ್ಷೆ ನಡೆಸಬೇಕು. ಹೊಸದಾಗಿ ದತ್ತಾಂಶಗಳನ್ನು ಪಡೆಯಬೇಕು ಎಂದು ಮನವಿ ಸಲ್ಲಿಸಿದ್ದೆವು ಎಂದು ವಿವರಿಸಿದರು.ಹಲವು ಸಂಘ-ಸಂಸ್ಥೆಗಳು ಹಾಗೂ ಸಮುದಾಯಗಳ ವಿರೋಧದ ನಡುವೆ ಸರ್ಕಾರ ಅವೈಜ್ಞಾನಿಕ ವರದಿ ಅನುಷ್ಠಾನಕ್ಕೆ ಮುಂದಾಗಿ ಮೂರು ನಾಲ್ಕು ಬಾರಿ ಸಂಪುಟ ಸಭೆಯಲ್ಲೂ ಚರ್ಚೆ ಮಾಡಿತ್ತು.

ಮರು ಸಮೀಕ್ಷೆಯನ್ನು ವೈಜ್ಞಾನಿಕವಾಗಿ, ಪಾರದರ್ಶಕವಾಗಿ, ಪ್ರತಿ ಮನೆಗಳಿಗೆ ಭೇಟಿ ನೀಡಿ ಜಾತಿವಾರು ಮಾಹಿತಿ ಸಂಗ್ರಹಿಸಬೇಕು. ಆನ್​ಲೈನ್ ಮೂಲಕವೂ ಅವಕಾಶ ಕಲ್ಪಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಹಿಂದಿನ ಗಣತಿಯ ಸಂದರ್ಭದಲ್ಲಿ ಆಗಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡು ಎಲ್ಲರಿಗೂ ಒಪ್ಪಿತವಾಗುವ ವರದಿ ಪಡೆಯಲಿ ಎಂಬುದೇ ನಮ್ಮ ಆಶಯ ಎಂದು ಹೇಳಿದರು.

ಒಕ್ಕಲಿಗರ ಸಂಘದಿಂದಲೂ ನಮ್ಮ ಸಮುದಾಯದ ಡಿಜಿಟಲ್ ಸರ್ವೆ ಮಾಡಿಸುತ್ತೇವೆ. ಮರು ಸಮೀಕ್ಷೆಯಲ್ಲೂ ಸರ್ಕಾರ ಲೋಪವೆಸಗಿದರೆ ನಮ್ಮ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಕೋನಪ್ಪರೆಡ್ಡಿ, ಯಲುವಳ್ಳಿ ರಮೇಶ್, ಎಲ್.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Share This Article
error: Content is protected !!
";