ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುರು ಶಿಷ್ಯರ ನಡುವೆ ಮಧುರವಾದ ಸಂಬಂಧ ಬೇಕು, ಹಳೆಯ ವಿದ್ಯಾರ್ಥಿಗಳು ನೆನಪಿಸುವ ಕಾರ್ಯಕ್ರಮ ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಂಘಟನೆಯ ಅಗತ್ಯವಿದೆ. ಇದರಿಂದ ಕಾಲೇಜುಗೂ ಸಹಾಯ, ಮುಂದಿನ ವಿದ್ಯಾರ್ಥಿಗಳಿಗೂ ಸಹಾಯ. ಹಳೆಯ ವಿದ್ಯಾರ್ಥಿಗಳು ಮತ್ತು ಹೊಸ ವಿದ್ಯಾರ್ಥಿಗಳ ನಡುವೆ ಈ ಸಂಘ ಸೇತುವೆಯಾಗಿ ಸಹಕಾರ ನೀಡುತ್ತದೆ. ಈ ಸಂಘವನ್ನ ವಾಟ್ಸಪ್ ಗ್ರೂಪ್ ಮಾಡುವ ಮೂಲಕ ಪ್ರಚಾರ ಮಾಡಿ, ಅದರ ಮೂಲಕ ಡೊನೇಷನ್ ಸದಸ್ಯತ್ವ ಕೂಡ ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಹಳೆಯ ಹೊಸ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಸಹಕಾರ ನೀಡಬೇಕು ಎಂದು ಪ್ರಾಸ್ತಾವಿಕ ನುಡಿ ನುಡಿದ ನಾಗವೇಣಿ ಹೇಳಿದರು.
ಚಿತ್ರದುರ್ಗ ನಗರದ ಎಸ್ ಜೆ.ಎಂ.ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮೇಲಿನಂತೆ ಮಾತನಾಡಿದರು.
ಇಲ್ಲಿನ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗು ಆಸ್ಪತ್ರೆಯ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾಂಗಣದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ. ಕಳಸದ್‌ಮಾತನಾಡಿ ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮ. ವಿದ್ಯಾರ್ಜನೆಯ ಹಸಿವನ್ನ ಪೂರೈಸಲು ಮನೆಯ ವಾತಾವರಣ ಪೂರಕವಿಲ್ಲದಾಗ, ಹೆಚ್ಚಿನ ವಿದ್ಯಾಭ್ಯಾಸ ಗುರುಗಳ ಸಮ್ಮುಖದಲ್ಲಿ ಪಡೆದು ಸಮಾಜಕ್ಕೆ ಉತ್ತಮರಾಗಲು ಹಾಗೂ ಉತ್ತಮ ನಾಗರೀಕರಾಗಲು ಗುರುಗಳ ಕೃಪೆ ಅಗತ್ಯವಾಗಿ ಬೇಕು. ಈ ಕಾಲೇಜು ಸ್ಥಾಪನೆಯಾಗಿ ೪೦ ವರ್ಷ ಸೇವೆ ಮಾಡಿದೆ. ಇಂಥ ಕಾಲೇಜಿನಲ್ಲಿ ಗುರುಗಳ ಸಮ್ಮುಖದಲ್ಲಿ ಓದಿದ ವಿದ್ಯಾರ್ಥಿಗಳು ಸುಖಮಯ ಜೀವನ ನಡೆಸುತ್ತಾ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುತ್ತಾ ಉತ್ತಮ ನಾಗರಿಕರಾದರೆ ಅದೇ ಗುರು ಕಾಣಿಕೆ. ಅಂತಹ ವಿದ್ಯಾರ್ಥಿಗಳೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ನೆರವೇರಿಸುತ್ತಿರುವುದು ಆಶಾದಾಯಖ ಕಾರ್ಯವಾಗಿದೆ. ಇಲ್ಲಿನ ಅಧಿಕಾರಿಗಳು ಕೂಡ ಗುರುಗಳ ಆಶೀರ್ವಾದದಿಂದ ತಯಾರಾಗಿ ಸಮಾಜಮುಖಿಯಾಗಿ ಸಾಧನೆಗೈದವರು. ಇಂಥ ಕ್ರಿಯಾಶೀಲ ಸಂಘದಲ್ಲಿ ತೊಡಗಿಸಿಕೊಂಡು ಏನಾದರೂ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದರು.
ಆಡಳಿತ ಮಂಡಳಿಯ ಸದಸ್ಯ ಡಾ.ಬಸವ ಬಸವ ಕುಮಾರ ಶ್ರೀಗಳು ಮಾತನಾಡಿ ದ.ರಾ. ಬೇಂದ್ರೆಯವರು ಹೇಳುವ ಹಾಗೆ ಹಳೆಯ ಸ್ನೇಹಿತನಿಗಿಂತ ಕನ್ನಡಿ ಬೇಕೆ, ಎನ್ನುವ ಮಾತಿನಂತೆ ನಮ್ಮ ಮನಸ್ಸು ಸಂಪೂರ್ಣವಾಗಿ ನಮ್ಮ ಆಪ್ತ ಸ್ನೇಹಿತನಿಗೆ ಗೊತ್ತಿರುತ್ತದೆ. ವಿಶೇಷವೆಂದರೆ ಇಲ್ಲಿನ ಹಲವಾರು ಕೆಲಸಗಾರರು ಮುರುಘಾಮಠದ ಕಲಾವಿದರಾಗಿದ್ದವರು. ಅವರು ಉತ್ತಮ ಕೆಲಸ ಮಾಡಿದವರು. ಹಿರಿಯರು ಮಾಡಿದ ಉತ್ತಮ ಕಾರ್ಯಗಳನ್ನು ನೆನಪು ಮಾಡಿಕೊಂಡಲ್ಲಿ ಅದನ್ನ ಮುಂದಿನವರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ. ಮಠದ ಮೂರು ಜನರತ್ನಗಳು ಜಯದೇವ ಶ್ರೀಗಳು ಜಯವಿಭವಶ್ರೀಗಳು ಮತ್ತು ಮಲ್ಲಿಕಾರ್ಜುನ ಶ್ರೀಗಳು ಮಾಡಿದ ಕಾರ್ಯವನ್ನು ನೆನಪು ಮಾಡಿಕೊಂಡಲ್ಲಿ ಅದು ಮುಂದಿನ ಪೀಳಿಗೆಗೆ ತಲುಪುತ್ತದೆ. ಆ ಕಾರ್ಯವನ್ನು ಮಾಡುವ ಮನಸ್ಸು ನಮ್ಮದಾಗಬೇಕಷ್ಟೆ. ಎಸ್‌ಜೆಎಂ ವಿದ್ಯಾಪೀಠ ಹುಟ್ಟು ಹಾಕಲು ಈ ಮೂವರ ಪರಿಶ್ರಮ ಸದಾ ನೆನಪುಮಾಡಿಕೊಳ್ಳುವಂತದ್ದು.
ಈ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳ ಸಂಗಮ ಅದು ಅದ್ಭುತ. ಇಂಥ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಮತ್ತು ಸಹಕರಿಸಬೇಕು. ಈ ಒಂದು ಕಾಲೇಜನ್ನು ಹೊರತುಪಡಿಸಿ ಉಳಿದ ಕಾಲೇಜುಗಳು ಸಹ ಇಂತಹ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಆ ಮೂಲಕ ಪವಿತ್ರವಾದ ಮಠದ ಬಗ್ಗೆ ಅಲ್ಲಿನ ಹಿರಿಯ ಶ್ರೀಗಳ ಬಗ್ಗೆ ತಿಳಿಸಬೇಕು, ನೆನಪಿಸಬೇಕು.
ಹಿರಿಯ ಶ್ರೀಗಳ ಪರಿಶ್ರಮದಿಂದ ನಿರ್ಮಾಣವಾದಂತಹ ಕಾಲೇಜುಗಳು. ಜಯದೇವ ಜಗದ್ಗುರುಗಳು ಧರ್ಮಾಧಿಕಾರಿಯಾಗಿ ಹೇಗೆ ಪೀಠ ನಡೆಸಿದರು ಎಂಬುದನ್ನು ಸ್ಮರಿಸಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲು ಮಲ್ಲಿಕಾರ್ಜುನ ಶ್ರೀಗಳು ಪಟ್ಟ ಪರಿಶ್ರಮವನ್ನ ನೆನಪು ಮಾಡಿಕೊಳ್ಳಬೇಕು. ಇಲ್ಲಿನ ವಿದ್ಯಾರ್ಥಿಗಳು ಮಠಕ್ಕೆ ಬರುವುದು ಹೆಮ್ಮೆ ಮತ್ತು ನಿಮ್ಮ ಹಕ್ಕು. ಒಮ್ಮೆ ಒಂದು ಮನೆಗೆ ಬೆಂಕಿ ಬಿದ್ದಾಗ ಒಂದು ಪಕ್ಷಿ ಕೂಡ ತನ್ನ ಕೊಕ್ಕಿನಲ್ಲಿ ಹನಿ ನೀರನ್ನು ಚಿಮುಕಿಸುತ್ತಾ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಂತೆ, ಸಮಾಜಮುಖಿ ಕಾರ್ಯಗಳಲ್ಲಿ ನಮ್ಮದು ಒಂದು ಪಾತ್ರ ಉಳಿಯಲು ಮನಸು ಮಾಡಬೇಕು. ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಸ್. ಶಂಕರ್, ಡಾ. ಎಸ್.ವಿ. ಚಂದ್ರಶೇಖರ್, ಬಿ.ಡಿ.ಉಮಾಶಂಕರ್ -ಅಪರ ಸಾರಿಗೆ ಆಯುಕ್ತರು ಬೆಂಗಳೂರು, ಎನ್. ಜಯಣ್ಣ , ಟಿಎಸ್‌ಎನ್ ಕನ್ಸ್ಟ್ರಕ್ಷನ್ ಚಿತ್ರದುರ್ಗ, ಎಸ್.ವಿ .ರವಿಶಂಕರ್ ಪ್ರಾಚಾರ್ಯರು ಎಸ್ ಜೆ ಎಂ ಪಾಲಿಟೆಕ್ನಿಕ್, ಮಹಾದೇವ, ಸತ್ಯನಾರಾಯಣ ನಾಯಕ, ಎಸ್. ಆರ್. ವೆಂಕಟೇಶ್, ಕೆ.ವಿ. ಸುರೇಶ್, ನಾಗಭೂಷಣ್ ಇತರರು ಉಪಸ್ಥಿತರಿದ್ದರು.
ಅಪಾರ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿದ ಈ ಸಂದರ್ಭ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಸಂಘದ ಕಾರ್ಯದರ್ಶಿ ಪದ್ಮಾವತಿ ನಿರೂಪಿಸಿದರು. ಲಕ್ಷ್ಮಿ, ಸಂಜನಾ, ಸಿಂಚನ, ಪೂಜಿತ ಪ್ರಾರ್ಥಿಸಿದರು. ಉಪನ್ಯಾಸಕಿ ಸವಿತಾ ಸ್ವಾಗತಿಸಿದರು.