ಜಾತಿ ಗಣತಿಯಲ್ಲಿ ವ್ಯತ್ಯಾಸವಾದರೆ ಅಗ್ನಿವಂಶ ಕ್ಷತ್ರಿಯದ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿಗಣತಿ ವರದಿಯನ್ನು
10 ವರ್ಷಗಳ ನಂತರ ಜಾರಿ ಮಾಡಲು ಮುಂದಾಗುತ್ತಿದೆ. ಸದ್ಯದ ಮಟ್ಟಿಗೆ ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಅಂಕಿ ಅಂಶಗಳು ಪ್ರಕಟವಾಗುತ್ತಿದ್ದು ಅಸಮರ್ಪಕವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳ ಯೂಥ್ ಫೋರ್ಸ್ ಅಧ್ಯಕ್ಷರಾದ ಮಾರುತಿ ಕೆ. ಆರ್. ಅವರು ಆರೋಪ ಮಾಡಿದರು. 

ತುಮಕೂರು ನಗರದಲ್ಲಿ ಜಾತಿಗಣತಿ ವರದಿ ಬಗ್ಗೆ ಮಾತನಾಡಿದ ಅವರು, ಏಪ್ರಿಲ್ 17 ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ವರದಿಯ ಪ್ರತಿಯನ್ನು ಎಲ್ಲಾ ಶಾಸಕರುಗಳಿಗೆ ನೀಡಲಾಗಿದೆ. ಆದರೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಅಥವಾ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗಿರುವಂತೆ ಅಗ್ನಿವಂಶ ಕ್ಷತ್ರಿಯ ಸಮುದಾಯದ ಅಂಕಿ ಅಂಶಗಳೇ ಇಲ್ಲ. ತಿಗಳ ಸಮುದಾಯವನ್ನು ಕೂಡ ಸಮರ್ಪಕವಾಗಿ ದಾಖಲು ಮಾಡಿಲ್ಲ. ಹೀಗಿದ್ದ ಮೇಲೆ ಈ ವರದಿಯನ್ನು ಅಗ್ನಿವಂಶ ಕ್ಷತ್ರಿಯ ಸಮುದಾಯದವರು ಒಪ್ಪಿಕೊಳ್ಳುವುದರೋ ಹೇಗೆ..? ಎಂದು ಪ್ರಶ್ನೆ ಮಾಡಿದರು. 

ತಿಗಳ ಸಮುದಾಯದವರು 1897ರಲ್ಲಿ 57,710  ಜನಸಂಖ್ಯೆ ಇತ್ತು ಇಲ್ಲಿಯವರೆಗೆ 128 ವರ್ಷಗಳು ಕಳೆದಿವೆ. ಈಗ ಅದರ ಪ್ರಮಾಣ ಎಷ್ಟಾಗಿರಬೇಕು ಇದರ ಯಾವುದೇ ಅಂದಾಜು ಸರ್ಕಾರ ದಾಖಲು ಮಾಡಿದಂತೆ ಕಾಣಿಸುತ್ತಿಲ್ಲ. ನೂರಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿರುವ ಅಗ್ನಿ ಬನ್ನಿರಾಯಸ್ವಾಮಿಯನ್ನು ಸರ್ಕಾರದ ವತಿಯಿಂದಲೇ  ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಕಳೆದ ಬಿಜೆಪಿ ಸರ್ಕಾರ ತಿಗಳ ಅಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ತಿಗಳ ಸಮುದಾಯ ಬಹುಶಹ ಗುರುತಿಗೆ ಬರುತ್ತದೆಯೇನೋ ಕಾಣೆ ಎಂದು ಅಸಮಾಧಾನ ಹೊರಹಾಕಿದರು. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಸುಮಾರು 10 ಲಕ್ಷಕ್ಕಿಂತ ಹೆಚ್ಚು ಅಗ್ನಿವಂಶ ಕ್ಷತ್ರಿಯ ಸಮುದಾಯದವರು ಇದ್ದಾರೆ. ಇವರ ಯಾವುದೇ ಮನೆಗಳಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಮಾಹಿತಿಯನ್ನು ಕೇಳಿಲ್ಲ. ಹೀಗಾಗಿ ಇದೊಂದು ಅವೈಜ್ಞಾನಿಕ ಜಾತಿಗಣತಿ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.

ಅಹಿಂದ ನಾಯಕರೆಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗದ ಪ್ರಮುಖ ಮುಖವಾಗಿದ್ದಾರೆ. ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯವು ಹಿಂದುಳಿದ ವರ್ಗಗಳಲ್ಲಿ ಕಂಡುಬರುವ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದು. ಇಂತಹ ಹಿಂದುಳಿದ ಸಮುದಾಯವನ್ನು ಮೇಲೆತ್ತುವ ಅವಶ್ಯಕತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು. ಸಮರ್ಪಕವಾಗಿರುವ ಅಂಕಿ ಅಂಶಗಳನ್ನು ಪ್ರಕಟ ಮಾಡಬೇಕು ಎಂದು ತಿಳಿಸಿದರು. 

ಏಪ್ರಿಲ್ 17ರಂದು ಅಧಿಕೃತವಾಗಿ ಪ್ರಕಟ ಮಾಡುವ ಜಾತಿಗಣತಿ ವರದಿಯಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಅಂಕಿ ಅಂಶಗಳ ಕೊರತೆ ಉಂಟಾದರೆ ಸರ್ಕಾರದ ವಿರುದ್ಧವಾಗಿ ಸಮುದಾಯ ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸಬೇಕಾಗುತ್ತದೆ. ಮಾತ್ರವಲ್ಲದೆ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯವೇ ತಮ್ಮ ಅಂಕಿ ಅಂಶಗಳನ್ನು ನಿಖರವಾಗಿ ಮಾಡಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

 

Share This Article
error: Content is protected !!
";