ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳಿಗೆ ಮತ್ತೊಂದು ಹೆಸರೇ ಸಿದ್ದರಾಮಯ್ಯ! ಎಂದು ಜೆಡಿಎಸ್ ಟೀಕಿಸಿದೆ.
ಪ್ರತಿ ಸಲವೂ ನಿಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಜಾತಿಯನ್ನೇ ಅಸ್ತ್ರವಾಗಿಸಿಕೊಂಡಿರುವುದೇ ನಿಮ್ಮ ಸಾಧನೆ!! ನಿಮಗೆ ಸಂಕೋಚ ಎನ್ನುವುದು ಇಲ್ಲವೇ? ಎಂದ ಜೆಡಿಎಸ್ ಪ್ರಶ್ನಿಸಿದೆ.
ಅಂದು ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಜಾತಿ ಗಣತಿ ವರದಿಯನ್ನು ಸ್ವೀಕರಿಸದೆ ತಿರಸ್ಕರಿಸಿದ್ದರು, ಬೆದರಿಕೆ ಹಾಕಿದ್ದರು..” ಎಂದು ಹಸಿಸುಳ್ಳು ಹೇಳಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಿಮಗೆ ಪದೇಪದೆ ಸುಳ್ಳು ಹೇಳುವ ದೈನೇಸಿ ಕರ್ಮವೇಕೆ? ಸದಸ್ಯ ಕಾರ್ಯದರ್ಶಿ ಸಹಿಯನ್ನೇ ಹಾಕಿಲ್ಲದ ವರದಿಯನ್ನು ಮುಖ್ಯಮಂತ್ರಿ ಸ್ವೀಕರಿಸಲು ಹೇಗೆ ಸಾಧ್ಯ? ಎಂದು ಜೆಡಿಎಸ್ ಪ್ರಶ್ನಿಸಿದೆ.
ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆ ವರದಿಗಳಿಗೆ ಗೆದ್ದಲು ಹಿಡಿಸಿದ ನಿಮ್ಮ ಸಮಯಸಾಧಕತನದ ಬಗ್ಗೆ ಎಲ್ಲರಿಗೂ ಗೊತ್ತು. ಅವೈಜ್ಞಾನಿಕ ವರದಿ ಇಟ್ಟುಕೊಂಡು ಕಪಟ ರಾಜಕೀಯ ಏಕೆ?
ಈಗಲೂ ನಿಮ್ಮ ವೈಫಲ್ಯಗಳನ್ನು ಮರೆಮಾಚಲು ರಾಜಕೀಯ ವ್ಯಾಪಾರಿಯಂತೆ ಇನ್ನೊಬ್ಬರ ಮೇಲೆ ಬೊಟ್ಟು ಮಾಡುತ್ತೀರಿ! ಇಂತಹ ಢೋಂಗಿತನ ನಿಮಗೇಕೆ? ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
10 ವರ್ಷಗಳ ಹಳೇ ಗಣತಿ ವರದಿಯನ್ನು ನಿಮ್ಮ ಭಾರತೀಯ ಕಾಂಗ್ರೆಸ್ ಹೈಕಮಾಂಡೇ ತಿರಸ್ಕರಿಸಿ ಕಸದ ಬುಟ್ಟಿಗೆ ಎಸೆದಿದೆ. ಇದು ನಿಮಗಾದ ಕಪಾಳಮೋಕ್ಷ. ಕೇಂದ್ರ ಸರ್ಕಾರವು ಜನಗಣತಿ ಜತೆಯಲ್ಲಿಯೇ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದ್ದರೂ ನೀವು ಮತ್ತೆ ಗಣತಿ ಡ್ರಾಮಾ ಮಾಡುತ್ತಿದ್ದೀರಿ!
ಕೈಲಾಗದವನು ಮಾಡುವ ಘನಂದಾರಿ ಕೆಲಸವೆಂದರೆ, ಇನ್ನೊಬ್ಬರ ವಿರುದ್ಧ ಅಪಪ್ರಚಾರ ಮಾಡುವುದು. ನೀವು ಅದನ್ನೇ ಮಾಡುತ್ತಿದ್ದೀರಿ. ಕನ್ನಡಿಗರ 165 ಕೋಟಿ ತೆರಿಗೆ ಹಣವನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿ ಫೋಲು ಮಾಡಿದ ನಿಮಗೆ ಕ್ಷಮೆ ಎಂಬುದಿಲ್ಲ.
ನೈತಿಕತೆ ಎನ್ನುವುದು ನಿಮಗೆ ಕಿಂಚಿತ್ತಾದರೂ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.