ಚಂದ್ರವಳ್ಳಿ ನ್ಯೂಸ್, ಹರಪ್ಪನಹಳ್ಳಿ:
ಕೆರೆಯ ನೀರು ಉಳಿಸಿದ ರಾಮ ನಗರದ ಕೃಷಿಕರಿಂದ ಶ್ರೀ ಜಗದ್ಗುರುಗಳವರಿಗೆ ಭಾವೈಕ್ಯತೆಯ ಭಕ್ತಿ ಸಮರ್ಪಣೆ ಮಾಡಿದ್ದಾರೆ.
ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹರಪನಹಳ್ಳಿ ತಾಲ್ಲೂಕಿನ ವ್ಯಾಪ್ತಿಯ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸುವ ಕೆರೆಗಳು ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ
ಈ ಭಾಗದ ರೈತರ ಅಪೇಕ್ಷೆಯಂತೆ ಬಾಗಿನ ಸಮರ್ಪಿಸಲು ಶ್ರೀ ಜಗದ್ಗುರುಗಳವರು ಶನಿವಾರ ದಾವಣಗೆರೆಯಿಂದ ಉಚ್ಚಂಗಿದುರ್ಗ ಮಾರ್ಗದಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಪ್ರವೇಶ ಮಾಡುವಾಗ ಮೊದಲಿಗೆ ಸಿಗುವ ಗ್ರಾಮವೇ ರಾಮನಗರ.
ಹೆಸರಿಗೆ ರಾಮನಗರ ಆಗಿದ್ದರೂ, ಗ್ರಾಮಪೂರ್ತಿ ಮುಸ್ಲಿಂ ಧರ್ಮಿಯರು ನೆಲೆಸಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡು ಇರುವ ಕೆರೆ ಭರ್ತಿ ಆಗಿರುವುದರಿಂದ ಮತ್ತು ಇತ್ತೀಚೆಗೆ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡು ನೀರು ವ್ಯರ್ಥ ಆಗುತ್ತಿರುವುದನ್ನು ಶ್ರೀ ಜಗದ್ಗುರುಗಳವರ ಊರಿನ ಮುಖಂಡರು ಗಮನಕ್ಕೆ ತಂದಾಗ, ಶ್ರೀ ಜಗದ್ಗುರುಗಳವರ ಮಾರ್ಗದರ್ಶನ ಮೇರೆಗೆ ಸಮರೋಪಾದಿಯಲ್ಲಿ ಕೆಲಸ ಕೈಗೊಳ್ಳಲಾಯಿತು.
ಶ್ರೀ ಜಗದ್ಗುರುಗಳವರು ಈ ಮಾರ್ಗದಲ್ಲಿ ದಯಮಾಡಿಸುವುದನ್ನು ಅರಿತ ಗ್ರಾಮಸ್ಥರು ಪೂಜ್ಯರನ್ನು ತಮ್ಮ ಗ್ರಾಮಕ್ಕೆ ಆಗಮಿಸುವಂತೆ ಬಿನ್ನವಿಸಿಕೊಂಡು, ಕರೆತಂದು ಭಕ್ತಿ ಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿದರು.