ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ. ಒಂದು ವೇಳೆ ಅವರು ಹೊಸ ಪಕ್ಷ ಕಟ್ಟಿದರೆ ನಾವು ಯಾರೂ ಅವರೊಂದಿಗೆ ಹೋಗುವುದಿಲ್ಲ ಎಂದು ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಮತ್ತು ಹರಿಹರ ಶಾಸಕ ಬಿ.ಪಿ.ಹರೀಶ್ ಜಂಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಇಲ್ಲಿನ ಜಿಎಂಐಟಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿ.ಎಂ.ಸಿದ್ದೇಶ್ವರ್, ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರ ಮಾಧ್ಯಮಗಳ ಸೃಷ್ಟಿ ಅಷ್ಟೇ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರು ಹೊಸ ಪಕ್ಷ ಕಟ್ಟುವುದಾಗಿ ಎಲ್ಲೂ ಹೇಳಿಲ್ಲ. ಅವರ ಉಚ್ಛಾಟನೆ ನಂತರ ಬೆಂಗಳೂರಿನಲ್ಲಿ ನಡೆದ ಬೆಂಬಲಿಗರ ಸಭೆಯಲ್ಲೂ ಈ ಬಗ್ಗೆ ಯಾವುದೇ ಪ್ರಸ್ತಾಪಗಳು ನಡೆದಿಲ್ಲ ಎಂದು ತಿಳಿಸಿದರು.
ಯತ್ನಾಳ್ ಈಗಲೂ ನಮ್ಮ ನಾಯಕರೇ. ನಮ್ಮ ನಾಯಕರು ಅಷ್ಟೇ ಅಲ್ಲ. ಉತ್ತರ ಕರ್ನಾಟಕ ಭಾಗದ ದೊಡ್ಡ ನಾಯಕ, ಹಿಂದೂಹುಲಿ, ಅಂಥಹ ನಾಯಕನನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ಅವರ ಅವಶ್ಯಕತೆ ಇದೆ. 2028 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಲು ಅವರು ಪಕ್ಷಕ್ಕೆ ಅನಿವಾರ್ಯ. ಹಾಗಾಗಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಸಂಬAಧ ರಾಷ್ಟಿçÃಯ ನಾಯಕರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದರು.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬದಲಾವಣೆಯಾಗುತ್ತದೆಯೇ ಎಂದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಕಾದು ನೋಡಿ ಎಂದ ಸಿದ್ದೇಶ್, ಬೆಂಗಳೂರಿನಲ್ಲಿ ಕೊಡಗಿನ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರ್ಕಾರ ನಿಸ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿದ್ದೇಶ್ವರ್ ಆಗ್ರಹಿಸಿದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಯತ್ನಾಳ್ ಅವರು ಹೊಸ ಪಕ್ಷ ಕಟ್ಟಲು ಮುಂದಾದರೆ ನಾವು ಬಿಡುವುದಿಲ್ಲ. ಒಂದು ವೇಳೆ ಕಟ್ಟಿದರೆ ನಾವು ಅವರೊಂದಿಗೆ ಹೋಗದೇ ಬಿಜೆಪಿಯಲ್ಲಿಯೇ ಇರುತ್ತೇವೆ. ಶೀಘ್ರವೇ ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳು ಬಗೆಹರಿಯಲಿವೆ. ಮುಂದಿನ 15 ದಿನಗಳಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಗಾದಿಗೆ ಹೊಸಬರ ಆಯ್ಕೆ ನಡೆಯಲಿದ್ದು, ನಂತರ ಎಲ್ಲ ರಾಜ್ಯಗಳ ಅಧ್ಯಕ್ಷರ ಆಯ್ಕೆಯಾಗಲಿದ್ದಾರೆ. ಆಗ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದರು.
ಪಕ್ಷದ ಶಿಸ್ತು ಸಮಿತಿಯಿಂದ ನನಗೂ ನೋಟಿಸ್ ಬಂದಿತ್ತು. ಈಗಾಗಲೇ ಅದಕ್ಕೆ ಉತ್ತರಿಸಿದ್ದೇನೆ. ಲೋಕಸಭಾ ಚುಣಾವಣೆ ವೇಳೆ ದಾವಣಗೆರೆ ಕ್ಷೇತ್ರದಲ್ಲಿ ನಡೆದಿರುವ ಒಳ ಒಪ್ಪಂದ ಕುರಿತ ನನ್ನ ಹೇಳಿಕೆ ಬಗ್ಗೆ ನೋಟಿಸಿಗೆ ಸಮಜಾಯಿಷಿ ನೀಡಿದ್ದೇನೆ. ಈ ವಿಚಾರದಲ್ಲಿ ಹಿಂದೆ, ಮುಂದೆ ಯಾವ ಕಾಲದಲ್ಲಿಯೂ ನನ್ನ ಉತ್ತರ ಒಂದೇ ಆಗಿರುತ್ತದೆ ಎಂದು ಬಿ.ಪಿ.ಹರೀಶ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ದಾವಣಗೆರೆ ವಿಶ್ವ ವಿದ್ಯಾನಿಲಯದಿಂದ ನಮ್ಮ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ರಿಗೆ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ದಾವಿವಿ ಗೌರವ ಡಾಕ್ಟರೇಟ್ ನೀಡಿದ್ದಕ್ಕೆ ಗೌರವ ಡಾಕ್ಟರೇಟ್ ಪುರಸ್ಕೃತ ರವೀಂದ್ರನಾಥ್‌ರಿಗೆ, ದಾವಿವಿಗೆ ಹಾಗೂ ಪಕ್ಷಾತೀತವಾಗಿ ಸಾಧನೆಯನ್ನು ಗುರುತಿಸಿ, ಗೌರವ ಡಾಕ್ಟರೇಟ್ ಕೊಡಲು ಕಾರಣವಾದ ರಾಜ್ಯ ಸರ್ಕಾರಕ್ಕೂ ಅಭಿನಂದಿಸುತ್ತೇನೆ ಎಂದು ಬಿ.ಪಿ.ಹರೀಶ ಮಾರ್ಮಿಕವಾಗಿ ತಿಳಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿ, ಎರಡೂ ಸದನದಲ್ಲಿ ಅಂಗೀಕಾರವಾಗಿದೆ. ರಾಜ್ಯದಲ್ಲಿ ವಕ್ಫ್ ವಿರುದ್ಧ ಮೊದಲು ಧ್ವನಿ ಎತ್ತಿ, ದಾಖಲೆಗಳನ್ನು ಕೊಟ್ಟಿದ್ದೇ ಬಸನಗೌಡ ಪಾಟೀಲ್ ಯತ್ನಾಳ. ವಕ್ಫ್ ಬಗ್ಗೆ ಅನ್ವರ್ ಮಾಣಿಪ್ಪಾಡಿ, ಶಾಸಕ ಬಸನಗೌಡ ಪಾಟೀಲರು ಧ್ವನಿ ಎತ್ತಿದ್ದರಿಂದಲೇ ಕೇಂದ್ರ ಸರ್ಕಾರವು ಇಂದು ಸಮರ್ಥವಾಗಿ ಮಸೂದೆ ಮಂಡಿಸಿ, ಅಂಗೀಕರಿಸುವುದಕ್ಕೆ ಸಾಧ್ಯವಾಗಿದೆ. ಸ್ವತಃ ಕೇಂದ್ರ ಸಚಿವ ಅಮಿತ್ ಶಾ ವಿಜಯಪುರದ ಸಾವಿರಾರು ಎಕರೆ ಜಾಗ ವಕ್ಫ್ ಕಬಳಿಸಲು ಹೋಗಿದ್ದನ್ನು ಪ್ರಸ್ತಾಪಿಸಿದ್ದರು. ಯತ್ನಾಳರ ಪರಿಶ್ರಮದ ಬಗ್ಗೆ ಕೇಂದ್ರ ನಾಯಕರ ಗಮನಕ್ಕೂ ತರುತ್ತೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ಯಶವಂತರವ್ ಜಾದವ್, ದೇವರನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಪಕ್ಷದ ಮುಖಂಡರಾದ ಬಿ.ಎಸ್.ಜಗದೀಶ್, ಶ್ರೀನಿವಾಸ್ ದಾಸ ಕರಿಯಪ್ಪ, ಅಣಬೇರು ಜೀವನಮೂರ್ತಿ, ವೀರೇಶ್ ಹನಗವಾಡಿ ಇತರರು ಉಪಸ್ಥಿತರಿದ್ದರು.