ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕನ್ನಡನಾಡಿನ ಮಾದರಿ ಕೃಷಿಕನಿಗೆ ಪ್ರಧಾನಿಗಳ ಮೆಚ್ಚುಗೆ” ಕಾಶ್ಮೀರ ಹಾಗೂ ಹಿಮಾಚಲದಂತಹ ಶೀತ ವಾತಾವರಣ ಇರುವ ರಾಜ್ಯಗಳಲ್ಲಷ್ಟೇ ಬೆಳೆಯುವ ಸೇಬು ಹಣ್ಣಿನ ಬೆಳೆಯನ್ನು ಬಿಸಿಲೇ ಹೆಚ್ಚಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿಯೂ ಸಾವಯವ ಗೊಬ್ಬರವನ್ನಷ್ಟೇ ಬಳಸಿ ಸೇಬು ಕೃಷಿ ಮಾಡಿ ಭರ್ಜರಿ ಬೆಳೆ ತೆಗೆದಿರುವ ಶ್ರೀಶೈಲ ತೇಲಿ ಅವರು ರೈತ ಸಮುದಾಯಕ್ಕೆ ಮಾದರಿಯಾಗಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾವಯವ ಗೊಬ್ಬರ, ಜೀವಾಮೃತ ಬಳಸಿ 7 ಎಕರೆ ಜಮೀನಿನಲ್ಲಿ ಸೇಬು ಕೃಷಿ ಮಾಡಿ ಕಾಶ್ಮೀರದ ಸೇಬಿನ ರುಚಿಯನ್ನೂ ಮೀರಿಸುವಂತೆ ಸೇಬು ಬೆಳೆದು ಸ್ಥಳೀಯ ಮಟ್ಟದಲ್ಲಿಯೇ ಉತ್ತಮ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುವ ಮೂಲಕ “ಬದ್ಧತೆ ಹಾಗೂ ಪರಿಶ್ರಮವಿದ್ದರೆ ಕೃಷಿಯಲ್ಲಿ ಖುಷಿ ಕಟ್ಟಿಟ್ಟ ಬುತ್ತಿ” ಎನ್ನುವುದನ್ನು ಸಾಧಿಸಿ ತೋರಿಸುವ ಮೂಲಕ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿಯೂ ಪ್ರಶಂಸೆ ಪಡೆದು ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಸಾಹಸಿ ರೈತನೆನಿಸಿಕೊಂಡಿರುವ ಶ್ರೀಶೈಲ ತೇಲಿ ಅವರು ಕೃಷಿಯಲ್ಲಿ ಮತ್ತಷ್ಟು ಸಾಧನೆಗೈದು ನಾಡಿನ ಲಕ್ಷಾಂತರ ಕೃಷಿಕ ರೈತರಿಗೆ ಮತ್ತಷ್ಟು ಪ್ರೇರಣೆ ನೀಡುವಂತಾಗಲಿ ಎಂದು ಅಭಿನಂದಿಸಿ ಹಾರೈಸುವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.