ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೋವು ನಿವೇದನೆ
____
ಎಂತಹ ಪಾಶರೂಪವೇ ನಿನ್ನದು
ನನ್ನೊಲುಮೆಯ ಗೆಳತಿ
ನಿಷ್ಕಾಮ ಮುಗ್ದತೆಯೊಳು ತೂರಿ
ಅಂತರಾಳದಿ ಬೆಳದಿಂಗಳರಳಿಸಿ
ಸುಮ ವನಗಳಲಿ ಸುಳಿದಾಡಿದೆ
ನಗ್ನ ಮನಸಿನಾಳಕಿಳಿದು
ರಂಗು ತರಂಗಗಳ ಚಿಮ್ಮಿಸಿ
ಸುಖೋಪಾಸನೆಗೆ ಕರೆದೊಯ್ದು
ಪೂರ್ಣ ಪೌರ್ಣಮಿಗೆ ನಾಂದಿಯಾದೆ
ಅರಿಯದ ಬಯಕೆಗಳ ಕರೆಸಿ
ಚುಂಬಿಸಿ ಆಲಂಗಿಸಿ ಮಧುಚಂದ್ರವೇರಿದೆ
ಬದುಕ ಬಾಳ ಬಂಡಿಗೆ
ನೊಗ ಕಟ್ಟುವ ಹುಸಿ ಇಟ್ಟು
ಪ್ರೇಮ ಸಿಂಹಾಸನವೇರಿಸಿ
ಭಾವನೆಗೆ ಬಣ್ಣಗಳ ಸೋಗು ಹಾಸಿದೆ
ಸ್ಪೂರ್ತಿಯ ಚಿಲುಮೆ ಬಾಡದಂತೆ
ಮಕರಂದ ಕಂಡ ದುಂಬಿ
ಹೂ ಮುತ್ತಲು ದಾವಿಸಿದಂತೆ
ಚೆಲುವ ರಾಶಿ ನನಗಾಗಿಯೇ ಬಂದಂತೆ
ಎಂತಹ ಬೆಡಗು ಬಿನ್ನಾಣ
ಘಮ ಸೊಬಗ ಚಿತ್ತಾರ ನಿನ್ನವು
ಪ್ರೀತಿಯೊಲುಮೆಯ ಸಂಗಾತಿಯೇ
ಅದೇಕೆ ಒಮ್ಮೆಲೇ ಬಿರುಗಾಳಿಯಂತೆ
ನನ್ನೆದುರು ಬೀಸಿ ನಿಂತೆ
ಹೃದಯ ಕಂಪಿಸಿ ಕೇಳುತಿದೆ
ಯಾವ ಕೊರತೆ ನಮ್ಮೀರ್ವರೊಳಗೆ
ಅದೇಕೆ ನನ್ನ ಹೂದೂಟಕೆ ಮುಳ್ಳಾದೆ
ಬಹು ದೂರದ ಬದುಕಿಗೂ
ಬಚ್ಚಿಟ್ಟುಕೊಳ್ಳುವ ಸ್ನೇಹವಿದು
ನೆನಪಾದರೆ ಬಂದು ಬಿಡು ಪ್ರಿಯೆ
ನಿನಗಾಗಿ ಕಾಯುತಿರುವೆ
ಮತ್ತೆ ಸ್ವೇಚ್ಛೆಯಾಗಿ ಹಾರೋಣ
ಬಾನ ಬಯಲ ಅನಂತದೊಳಗೆ
ಕವಿತೆ: ಕುಮಾರ್ ಬಡಪ್ಪ, ಚಿತ್ರದುರ್ಗ.

