ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು – ಡಿಸಿಎಂ ಡಿ.ಕೆ.ಶಿವಕುಮಾರ್ ಸಾಹೇಬರ ಲೇಟೆಸ್ಟ್ ನುಡಿಮುತ್ತುಗಳು ಇವಾಗಿವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಡಿದ್ದೀರಾ? ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು ಪಾಳೆಗಾರಿಕೆ ಅಲ್ಲ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತಭಿಕ್ಷೆ ನೀಡಿರುವ ಮತದಾರ ಪ್ರಭುಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಹೊರತು ಯಾವ ದೊಣ್ಣೆ ನಾಯಕನಿಗೂ ಅಲ್ಲ.
ಈ ನಿಮ್ಮ ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಅವರು ತಾಕೀತು ಮಾಡಿದ್ದಾರೆ.